Publish Date: Thu, 04 Jun 2026 (10:00 IST)
Updated Date: Thu, 04 Jun 2026 (10:03 IST)
ಮುಂಬೈ: ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಸೂರ್ಯಕುಮಾರ್ ಯಾದವ್ ಕೊಕ್ ನೀಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾಗೆ ಹೊಸ ನಾಯಕನ ಆಗಮನವಾಗಲಿದೆ ಎಂಬ ಸುದ್ದಿ ದಟ್ಟವಾಗಿದೆ. ಈ ಮಧ್ಯೆ ಮೂವರು ಹೆಸರು ಬಲವಾಗಿ ಕೇಳಿಬರುತ್ತಿದೆ.
ಟೀಂ ಇಂಡಿಯಾ ಟಿ20 ನಾಯಕತ್ವ ವಹಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಫಾರ್ಮ್ ಈಗ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಮಿಸ್ಟರ್ 360 ಆಟಗಾರ ಎಂದೆಲ್ಲಾ ಹೊಗಳಿಸಿಕೊಂಡಿದ್ದ ಸೂರ್ಯ ನಾಯಕರಾದ ಮೇಲೆ ಬ್ಯಾಟಿಂಗ್ ಮರೆತವರಂತೆ ಆಡುತ್ತಿದ್ದರು. ಇದರಿಂದಾಗಿ ಅವರು ತಂಡಕ್ಕೆ ಹೊರೆಯಾಗುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿದ್ದವು.
ಆದರೆ ಇಲ್ಲಿಯವರೆಗೆ ಟಿ20 ವಿಶ್ವಕಪ್ ದೃಷ್ಟಿಯಿಂದ ತಂಡದ ನಾಯಕತ್ವ ಬದಲಾವಣೆ ಮಾಡಿದರೆ ತೊಂದರೆಯಾಗಬಹುದು ಎಂದು ಬಿಸಿಸಿಐ ಸುಮ್ಮನಿತ್ತು. ಆದರೆ ಇದೀಗ ಟಿ20 ವಿಶ್ವಕಪ್ ಮುಗಿದಿದ್ದು ಮುಂಬರುವ ಐರ್ಲೆಂಡ್ ಸರಣಿಗೆ ಹೊಸ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿಯಿದೆ.
ಈ ಪೈಕಿ ಈಗ ಐಪಿಎಲ್ ನಲ್ಲಿ ನಾಯಕರಾಗಿ ಮಿಂಚಿರುವ ಶ್ರೇಯಸ್ ಅಯ್ಯರ್ ಹೆಸರು ಮುನ್ನಲೆಯಲ್ಲಿದೆ. ಅವರ ಜೊತೆಗೆ ತಿಲಕ್ ವರ್ಮ ಮತ್ತು ಇಶಾನ್ ಕಿಶನ್ ಹೆಸರುಗಳೂ ಸುದ್ದಿಯಲ್ಲಿದೆ. ಈ ಮೂವರ ಪೈಕಿ ಶ್ರೇಯಸ್ ಅಯ್ಯರ್ ನಾಯಕರಾಗಿ ಯಶಸ್ವಿಯಾದವರು. ಹೀಗಾಗಿ ಅವರಿಗೇ ಮೊದಲ ಆದ್ಯತೆ ಸಿಗುವ ಸಾಧ್ಯತೆಯಿದೆ. ಶ್ರೇಯಸ್ ಅಯ್ಯರ್ ಗೆ ಈಗ 31 ವರ್ಷ. ಒಂದು ವೇಳೆ ಕಿರಿಯ ವಯಸ್ಸಿನ ನಾಯಕನಿಗೆ ಪಟ್ಟ ನೀಡುವುದಾದರೆ ತಿಲಕ್ ವರ್ಮ ಮತ್ತು ಇಶಾನ್ ಕಿಶನ್ ನಡುವೆ ಸ್ಪರ್ಧೆ ಹೆಚ್ಚಾಗಬಹುದು. ಐರ್ಲೆಂಡ್ ಸರಣಿಗೆ ಸದ್ಯದಲ್ಲೇ ತಂಡದ ಆಯ್ಕೆ ನಡೆಯಲಿದ್ದು ಯಾರು ನಾಯಕರಾಗುತ್ತಾರೆ ಎಂಬ ವಿಚಾರ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ