Publish Date: Tue, 09 Jul 2024 (14:21 IST)
Updated Date: Tue, 09 Jul 2024 (14:35 IST)
ಮಂಗಳೂರು: ಕ್ಯಾಚ್ ಹಿಡಿದು ವಿಶ್ವಕಪ್ ಗೆಲ್ಲಿಸಿಕೊಟ್ಟ ಸೂರ್ಯಕುಮಾರ್ ಯಾದವ್ ಇದೀಗ ತಮ್ಮ ಪತ್ನಿಯ ತವರೂರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಮಂಗಳೂರು ಮತ್ತು ಉಡುಪಿಯ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಸೂರ್ಯಕುಮಾರ್ ಪತ್ನಿ ದೇವಿಶಾ ಮೂಲತಃ ಕರಾವಳಿಯವರು. ಹೀಗಾಗಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕಾಪು ಮಾರಿಗುಡಿಗೆ ಪೂಜೆ ಸಲ್ಲಿಸಿದ್ದಾರೆ. ದೇವರ ದರ್ಶನದ ಬಳಿಕ ಮಾಧ್ಯಮಗಳು ಅವರನ್ನು ಮಾತನಾಡಿಸಿದ್ದು, ಸೂರ್ಯ ಕೂಡಾ ನಗು ನಗುತ್ತಲೇ ಇಲ್ಲಿಗೆ ಬಂದ ಖುಷಿ ಹಂಚಿಕೊಂಡಿದ್ದಾರೆ.
ಐದು ವರ್ಷ ಮೊದಲು ಇಲ್ಲಿಗೆ ಬಂದಿದ್ದೇನೆ. ಈಗ ಸೆಲೆಬ್ರಿಟಿಯಾಗಿ ಬಂದಿದ್ದರೂ ದೇವಾಲಯಕ್ಕೆ ಬಂದಾಗ ನಾನು ಒಬ್ಬ ಸಾಮಾನ್ಯನಾಗಿಯೇ ಫೀಲ್ ಮಾಡುತ್ತಿದ್ದೇನೆ. ಇಲ್ಲಿಗೆ ಬರುವುದು ನನಗೆ ಖುಷಿ. ದೇವರ ಆಶೀರ್ವಾದದಿಂದಲೇ ನಾನು ಇಲ್ಲಿದ್ದೇನೆ ಎಂದು ಹಿಂದಿಯಲ್ಲೇ ಮಾತನಾಡಿದರು.
ಆದರೆ ಸೂರ್ಯ ಪತ್ನಿ ದೇವಿಶಾ ನಿರರ್ಗಳವಾಗಿ ತುಳುವಿನಲ್ಲಿ ಮಾತನಾಡಿದರು. ಯಾವುದೇ ಹರಕೆ ತೀರಿಸಲು ಬಂದಿಲ್ಲ. ಆದರೆ ಇಲ್ಲಿಗೆ ಬಂದಾಗ ದೇವರ ದರ್ಶನ ಮಾಡಬೇಕೆನಿಸಿತು ಎಂದರು. ವಿಶೇಷವೆಂದರೆ ನಡುವೆ ಸೂರ್ಯ ಕೂಡಾ ತುಳು ಭಾಷೆಯ ಶಬ್ಧವೊಂದನ್ನು ಹೇಳಿಕೊಂಡರು. ಅಷ್ಟೇ ಅಲ್ಲದೆ, ಅರ್ಚಕರು ತುಳುವಿನಲ್ಲೇ ಪ್ರಾರ್ಥನೆ ಮಾಡುವಾಗ ಚೆನ್ನಾಗಿ ಅರ್ಥ ಮಾಡಿಕೊಂಡರು.
ಇನ್ನು ಅರ್ಚಕರೂ ಕೂಡಾ ಮುಂದಿನ ಸಲ ಬರುವಾಗ ನಿಮ್ಮ ಪತಿಗೆ ತುಳು ಕಲಿಸಿಕೊಡಿ ಎಂದು ದೇವಿಶಾಗೆ ಸಲಹೆ ಕೊಟ್ಟರು. ದೇವಿಶಾ ಕೂಡಾ ಇದಕ್ಕೆ ನಗುತ್ತಾ ಒಪ್ಪಿಗೆ ಸೂಚಿಸಿದ್ದಾರೆ.