ಕೊಲಂಬೊ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಮತ್ತು ಕೊನೆಯ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಂತಾಗಲಿದೆ.
ಗೌತಮ್ ಗಂಭೀರ್ ಗೆ ಟೀಂ ಇಂಡಿಯಾ ಕೋಚ್ ಆಗಿ ಇದು ಮೊದಲ ಸರಣಿಯಾಗಿತ್ತು. ಮೊದಲ ಸರಣಿಯಲ್ಲೇ ಗಂಭೀರ್ ಗೆ ನೂತನ ನಾಯಕ ಸೂರ್ಯಕುಮಾರ್ ಯಾದವ್ ಕ್ಲೀನ್ ಸ್ವೀಪ್ ಉಡುಗೊರೆ ನೀಡುತ್ತಾರಾ ಎಂದು ಕಾದುನೋಡಬೇಕಿದೆ. ಸೂರ್ಯಗೂ ಟಿ20 ನಾಯಕನಾಗಿ ಈ ಸರಣಿ ಕ್ಲೀನ್ ಸ್ವೀಪ್ ಆದರೆ ದೊಡ್ಡ ಕೋಡು ಬಂದಂತೆ.
ಕಳೆದ ಪಂದ್ಯದಲ್ಲಿ ಶುಬ್ಮನ್ ಗಿಲ್ ಗಾಯದ ಸಮಸ್ಯೆಯಿಂದ ಆಡಿರಲಿಲ್ಲ. ಹೀಗಾಗಿ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ತಮಗೆ ಸಿಕ್ಕ ಅವಕಾಶವನ್ನು ಅವರು ಬಳಸಿಕೊಳ್ಳಲು ವಿಫಲರಾದರು. ಹೀಗಾಗಿ ಈ ಪಂದ್ಯದಲ್ಲಿ ಗಿಲ್ ವಾಪಸಾದರೆ ಸಂಜು ಮತ್ತೆ ಬೆಂಚ್ ಕಾಯಿಸಬೇಕಾದೀತು.
ಇನ್ನು, ಕಳೆದ ಪಂದ್ಯದಲ್ಲಿ ರಿಯಾನ್ ಪರಾಗ್ ಬೌಲಿಂಗ್ ನಲ್ಲೂ ವಿಕೆಟ್ ಕೀಳಲು ವಿಫಲರಾದರೂ ರನ್ ನಿಯಂತ್ರಣ ಹೇರಿ ಇಂಪ್ರೆಸ್ ಮಾಡಿದ್ದರು. ಹೀಗಾಗಿ ಅಕ್ಸರ್ ಪಟೇಲ್, ರವಿ ಬಿಷ್ಣೋಯ್ ಜೊತೆಗೆ ಪರಾಗ್ ಕೂಡಾ ದಾಳಿಗಿಳಿಯಬಹುದು. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯತೆ ಕಡಿಮೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.