ಬೇ ಓವಲ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ ಭರ್ಜರಿಯಾಗಿ 65 ರನ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಆಸರೆಯಾಗಿದ್ದು ಟಿ20 ಕ್ರಿಕೆಟ್ ನ ಹಾಲಿ ನಂ.1 ಬ್ಯಾಟಿಗ ಸೂರ್ಯಕುಮಾರ್ ಯಾದವ್. ಟಿ20 ಕ್ರಿಕೆಟ್ ನಲ್ಲಿ ಎರಡನೇ ಶತಕ ದಾಖಲಿಸಿದ ಸೂರ್ಯ ಕೇವಲ 55 ಎಸೆತಗಳಲ್ಲಿ 111 ರನ್ ಗಳಿಸಿದರು. ಇದರಿಂದಾಗಿ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲು ಸಾಧ‍್ಯವಾಯಿತು.
ಈ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಗೆ ಭಾರತದ ನಿಯಂತ್ರಿತ ಬೌಲಿಂಗ್ ಎದುರು ನಿಲ್ಲಲಾಗಲಿಲ್ಲ. ನಾಯಕ ಕೇನ್ ವಿಲಿಯಮ್ಸನ್ ಮಾತ್ರ 65 ರನ್ ಗಳಿಸಿ ಪ್ರತಿರೋಧ ತೋರಿದರು. ಭಾರತದ ಪರ ದೀಪಕ್ ಹೂಡಾ 4, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್ ತಲಾ 2, ಭುವನೇಶ್ವರ್ ಕುಮಾರ್, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಕಬಳಿಸಿದರು. ಇದರೊಂದಿಗೆ ನ್ಯೂಜಿಲೆಂಡ್ 18.5 ಓವರ್ ಗಳಲ್ಲಿ 126 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಗೆಲುವಿನ ಬಳಿಕ ಪಂದ್ಯ ಶ್ರೇಷ್ಠರಾದ ಸೂರ್ಯಕುಮಾರ್ ತಮ್ಮ ಇತ್ತೀಚೆಗಿನ ಫಾರ್ಮ್ ಹಿಂದಿನ ರಹಸ್ಯವೇನೆಂದು ಬಿಚ್ಚಿಟ್ಟರು. ಬ್ಯಾಟಿಂಗ್ ಮಾಡುವಾಗ ಒಂದು ಉದ್ದೇಶವಿಟ್ಟುಕೊಂಡು ಬ್ಯಾಟ್ ಮಾಡುತ್ತೇನೆ. ಮತ್ತು ಅದನ್ನು ಎಂಜಾಯ್ ಮಾಡುತ್ತೇನೆ. ಅಭ್ಯಾಸದ ವೇಳೆ ಮಾಡಿದ್ದನ್ನು ಇಲ್ಲಿ ಪ್ರಯೋಗಿಸುತ್ತೇನೆ. ಇದರ ಫಲಿತಾಂಶವೇ ಈ ಇನಿಂಗ್ಸ್ ಎಂದಿದ್ದಾರೆ. ಟಿ20 ವಿಶ್ವಕಪ್ ಬಳಿಕ ಸೂರ್ಯ ಫಾರ್ಮ್ ಈಗಲೂ ಮುಂದುವರಿದಿದೆ.