ಮುಂಬೈ: ಟೀಂ ಇಂಡಿಯಾವನ್ನು ನಾಯಕರಾಗಿ ಯಶಸ್ವಿಯಾಗಿ ಮುನ್ನಡೆಸಿದ ನಾಯಕ ಸೌರವ್ ಗಂಗೂಲಿ. ಭಾರತ ತಂಡ ವಿದೇಶದಲ್ಲೂ ಗೆಲುವಿನ ರುಚಿ ಕಂಡಿದ್ದೇ ಗಂಗೂಲಿಯಿಂದ ಎಂದರೆ ತಪ್ಪಾಗಲಾರದು.
ಅದೇ ಗಂಗೂಲಿ ಈಗ ಕ್ರಿಕೆಟ್ ಆಳುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಚುಕ್ಕಾಣಿ ಹಿಡಿಯುವ ಹಂತದಲ್ಲಿದ್ದಾರೆ. ಬಿಸಿಸಿಐಗೆ ನೂತನ ಅಧ್ಯಕ್ಷರ ನೇಮಕ ಅಧಿಕೃತವಾಗಿ ಅಕ್ಟೋಬರ್ 23 ರಂದು ಘೋಷಣೆಯಾಗಲಿದ್ದು, ಗಂಗೂಲಿ ಅಧ್ಯಕ್ಷರಾಗಿ ಬಿಸಿಸಿಐ ಚುಕ್ಕಾಣಿ ಹಿಡಿಯುವ ದ್ವಿತೀಯ ಟೀಂ ಇಂಡಿಯಾ ಮಾಜಿ ನಾಯಕ ಎನಿಸಿಕೊಳ್ಳಲಿದ್ದಾರೆ.
ಗಂಗೂಲಿ ಸ್ವತಃ ಒಬ್ಬ ಕ್ರಿಕೆಟಿಗರಾಗಿ, ನಾಯಕರಾಗಿ ಅನುಭವ ಹೊಂದಿರುವುದರಿಂದ ಅವರಿಗೆ ಕ್ರಿಕೆಟಿಗರ ಕಷ್ಟ ನಷ್ಟಗಳು, ಚೆನ್ನಾಗಿ ಅರಿವಿರುತ್ತದೆ. ಇದುವರೆಗೆ ಬಿಸಿಸಿಐ ಅಧ್ಯಕ್ಷರಾದವರಲ್ಲಿ ಹೆಚ್ಚಿನವರು ಕಡಿಮೆ ಕ್ರಿಕೆಟ್ ಅನುಭವ ಹೊಂದಿದವರು. ಆದರೆ ಕೇವಲ ಆಡಳಿತಾನುಭವ ಹೆಚ್ಚಿದ್ದವರು. ಆದರೆ ಗಂಗೂಲಿಗೆ ಈಗಾಗಲೇ ಕ್ರಿಕೆಟಿಗನಾಗಿಯೂ ಗೊತ್ತು, ಹಾಗೆಯೇ ಆಡಳಿತಾತ್ಮಕ ವಿಚಾರಗಳು, ಸಮಸ್ಯೆಗಳೂ, ಸವಾಲುಗಳೂ ಚೆನ್ನಾಗಿ ಗೊತ್ತು. ಹೀಗಾಗಿ ಅವರು ಬಿಸಿಸಿಐ ಅಧ್ಯಕ್ಷರಾದರೆ ಅದರಿಂದ ಕ್ರಿಕೆಟ್ ಗೆ ಹೆಚ್ಚಿನ ಲಾಭವಾಗಬಹುದು ಎಂದೇ ಎಲ್ಲರ ಲೆಕ್ಕಾಚಾರ.