ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಮರಳಿ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಡೆಯಬಹುದು. ಆದರೆ ಇದಕ್ಕೆ ಒಂದು ಷರತ್ತು ಅನ್ವಯವಾಗಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಇತ್ತೀಚೆಗೆ ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರ ವಾರ್ಷಿಕ ವೇತನ ಗುತ್ತಿಗೆ ಪಟ್ಟಿ ಪ್ರಕಟಿಸಿತ್ತು. ಆದರೆ ಈ ಪಟ್ಟಿಯಲ್ಲಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿರಲಿಲ್ಲ. ಇಬ್ಬರೂ ದೇಶೀಯ ಕ್ರಿಕೆಟ್ ಆಡದೇ ಸತಾಯಿಸಿದ್ದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ಇದೇ ಕಾರಣಕ್ಕೆ ಇಬ್ಬರಿಗೂ ಗುತ್ತಿಗೆ ನೀಡದೇ ಒಂದು ರೀತಿಯಲ್ಲಿ ಶಿಕ್ಷೆ ನೀಡಲಾಗಿತ್ತು.
ಅದರ ಅರ್ಥ ಇಬ್ಬರಿಗೂ ಮುಂದೆ ಟೀಂ ಇಂಡಿಯಾದಲ್ಲಿ ಆಡಲು ಅವಕಾಶವೇ ಸಿಗಲ್ಲ ಎಂದಲ್ಲ. ಈ ಇಬ್ಬರಿಗೂ ಮತ್ತೆ ಗುತ್ತಿಗೆ ಪಟ್ಟಿಗೆ ಸೇರಲು ಅವಕಾಶವಿದೆ. ಆದರೆ ಅದಕ್ಕೆ ಅವರು ಒಂದು ಕೆಲಸ ಮಾಡಲೇಬೇಕು. ಗುತ್ತಿಗೆ ಪಡೆಯಲು ಅಗತ್ಯವಾದಷ್ಟು ಪಂದ್ಯಗಳನ್ನು ಅವರು ಆಡಿದರೆ ಮತ್ತೆ ಅವರು ಗುತ್ತಿಗೆ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ.
ಟೀಂ ಇಂಡಿಯಾ ಆಯ್ಕೆ ಸಮಿತಿಯ ಶಿಫಾರಸ್ಸಿನ ಅನ್ವಯ ಕ್ರಿಕೆಟಿಗರಿಗೆ ವಾರ್ಷಿಕ ಗುತ್ತಿಗೆ ನೀಡಲಾಗುತ್ತದೆ. ಇದೀಗ 30 ಆಟಗಾರರಿಗೆ ಗುತ್ತಿಗೆ ನೀಡಲಾಗಿದೆ. ಈ ಇಬ್ಬರು ಆಟಗಾರರಿಗೆ ಅರ್ಹತೆಯಿಲ್ಲ ಎಂದು ಗುತ್ತಿಗೆಯಿಂದ ಹೊರಗಿಟ್ಟಿರುವುದಲ್ಲ. ಇಬ್ಬರೂ ಸಮರ್ಥ ಆಟಗಾರರೇ. ಆದರೆ ಫಿಟ್ ಆಗಿದ್ದರೂ ರೆಡ್ ಬಾಲ್ ಕ್ರಿಕೆಟ್ ಆಡಲ್ಲ ಎಂದರೆ ಏನು ಮಾಡಬೇಕು ಎಂದು ಬಿಸಿಸಿಐ ಮೂಲಗಳು ಹೇಳಿವೆ.