ಮುಂಬೈ: ರಣಜಿ ಟ್ರೋಫಿಯಲ್ಲಿ ಆಡದೇ ಇದ್ದ ಕಾರಣಕ್ಕೆ ವಾರ್ಷಿಕ ಗುತ್ತಿಗೆಯಿಂದ ಹೊರಗುಳಿದಿದ್ದ ಇಶಾನ್ ಕಿಶನ್ ಈಗ ಮತ್ತೊಂದು ಪ್ರಮಾದವೆಸಗಿದ್ದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಲಿದ್ದಾರೆ.
ರಣಜಿ ಟ್ರೋಫಿ ಫಾರ್ಮ್ಯಾಟ್ ನಲ್ಲಿ ಆಡದ ಇಶಾನ್ ಕಿಶನ್ ಟಿ20 ಕ್ರಿಕೆಟ್ ಮಾದರಿಯಲ್ಲಿ ಆಡಿದ್ದರು. ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಇಶಾನ್ ಆಡಿದ್ದರು. ಆದರೆ ಅಲ್ಲೂ ಅವರು ವೈಫಲ್ಯಕ್ಕೊಳಗಾಗಿದ್ದರು. ಆದರೆ ವಿಷಯವಿರುವುದು ಅಲ್ಲಲ್ಲ. ಇಶಾನ್ ಈ ಪಂದ್ಯಕ್ಕೆ ತೊಟ್ಟಿದ್ದ ಹೆಲ್ಮಟ್ ಈಗ ವಿವಾದಕ್ಕೆ ಕಾರಣವಾಗಿದೆ.
ದೇಶೀಯ ಕ್ರಿಕೆಟ್ ನಲ್ಲಿ ಆಡುವಾಗ ಆಟಗಾರರು ಬಿಸಿಸಿಐ ಲೋಗೋ ಇರುವ ಹೆಲ್ಮೆಟ್ ಧರಿಸುವಂತಿಲ್ಲ. ಆದರೆ ಇಶಾನ್ ಡಿವೈ ಪಾಟೀಲ್ ಟೂರ್ನಿ ಆಡುವಾಗ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್ ಧರಿಸಿ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಮತ್ತೆ ಇಶಾನ್ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗುವ ಸಾಧ‍್ಯತೆಯಿದೆ.
ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಸೂಚನೆ ಹೊರತಾಗಿಯೂ ಇಶಾನ್ ರಣಜಿ ಟ್ರೋಫಿಯಲ್ಲಿ ಆಡಿಲ್ಲ. ಈ ವಿಚಾರಕ್ಕೆ ಅಸಮಾಧಾನಗೊಂಡ ಬಿಸಿಸಿಐ ಅವರನ್ನು ಇತ್ತೀಚೆಗೆ ಬಿಡುಗಡೆ ಮಾಡಿದ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಹೊರಹಾಕಿದೆ. ಅವರ ಜೊತೆಗೆ ಇದೇ ತಪ್ಪು ಮಾಡಿರುವ ಶ್ರೇಯಸ್ ಅಯ್ಯರ್ ಗೂ ಇದೇ ಶಿಕ್ಷೆ ನೀಡಿದೆ. ಈ ವಿಚಾರ ಈಗ ಭಾರೀ ಸುದ್ದಿಯಾಗಿದೆ. ಇದರ ನಡುವೆಯೇ ಇಶಾನ್ ಮತ್ತೊಂದು ತಪ್ಪು ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ.