ಸಿಡ್ನಿ: ಶ್ರೇಯಸ್ ಅಯ್ಯರ್ ಮೈದಾನದಲ್ಲಿ ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಬಿದ್ದು ಪಕ್ಕೆಲುಬಿನ ಬಳಿ ನೋವು ಅನುಭವಿಸಿದ್ದನ್ನು ಮಾತ್ರ ಅಭಿಮಾನಿಗಳು ಗಮನಿಸಿದ್ದರು. ಆದರೆ ಅದು ಎಷ್ಟು ಗಂಭೀರವಾದ ಗಾಯವಾಗಿತ್ತು ಎನ್ನುವುದು ಈಗಷ್ಟೇ ಗೊತ್ತಾಗುತ್ತಿದೆ.
ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದ ವೇಳೆ ಕ್ಯಾಚ್ ಹಿಡಿಯುವ ಯತ್ನದಲ್ಲಿ ಶ್ರೇಯಸ್ ಅಯ್ಯರ್ ನೆಲಕ್ಕೆ ಬಿದ್ದು ಗಾಯ ಮಾಡಿಕೊಂಡಿದ್ದರು. ತಕ್ಷಣವೇ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಗಿತ್ತು. ಆದರೆ ಕ್ಷಣ ಕ್ಷಣಕ್ಕೂ ಅವರ ನೋವು ಹೆಚ್ಚಾದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಗಲೇ ಅವರ ಗಾಯದ ಗಂಭೀರತೆ ಅರಿವಾಗಿದ್ದು. ಶ್ರೇಯಸ್ ಗೆ ಸ್ಪ್ಲೀನ್ ಇಂಜ್ಯುರಿಯಾಗಿತ್ತು. ಸ್ಪ್ಲೀನ್ ಅಥವಾ ಗುಲ್ಮ ಎಂದರೆ ದೇಹದ ಎಡಭಾಗದ ಮೇಲಿನ ಮೂಲೆಯಲ್ಲಿರುವ ಅಂಗವಾಗಿದ್ದು ಇದು ರಕ್ತ ಶೋಧಿಸುವ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯ ಮಾಡುತ್ತದೆ. ಇದಕ್ಕೆ ಪೆಟ್ಟಾಗಿದ್ದರಿಂದ ಶ್ರೇಯಸ್ ಗೆ ಆಂತರಿಕ ರಕ್ತಸ್ರಾವವಾಗಿತ್ತು.
ಪರಿಣಾಮ ಅವರನ್ನು ಐಸಿಯುವಿಗೆ ದಾಖಲಿಸಲಾಗಿತ್ತು. ಆಗಲೂ ಅವರ ಪಲ್ಸ್ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತಲೇ ಇತ್ತು. ಇದು ಅಪಾಯಕಾರೀ ಸ್ಥಿತಿಯಾಗಿತ್ತು. ಇಲ್ಲಿಗೆ ಆಗುವ ಪೆಟ್ಟು ಎಷ್ಟು ಗಂಭೀರವೆಂದರೆ ಪ್ರಾಣಕ್ಕೂ ಅಪಾಯಕಾರಿಯಾಗಿದೆ. ಹೀಗಾಗಿಯೇ ಅವರ ಕುಟುಂಬಸ್ಥರೂ ಆತಂಕ್ಕೀಡಾಗಿದ್ದರು.
ಹೇಗೋ ವೈದ್ಯರು ಪ್ರಯಾಸಪಟ್ಟು ಶ್ರೇಯಸ್ ಪ್ರಾಣ ಕಾಪಾಡಿದ್ದಾರೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಇದರಿಂದ ಅಭಿಮಾನಿಗಳೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.