Publish Date: Fri, 22 Dec 2023 (08:20 IST)
Updated Date: Fri, 22 Dec 2023 (08:54 IST)
ಪರ್ಲ್: ದ.ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯ ಕೇವಲ ಭಾರತಕ್ಕೆ ಮಾತ್ರವಲ್ಲ, ಸಂಜು ಸ್ಯಾಮ್ಸನ್ ವೃತ್ತಿ ಜೀವನಕ್ಕೂ ನಿರ್ಣಾಯಕವಾಗಿತ್ತು.
ಸಂಜು ಸ್ಯಾಮ್ಸನ್ ಗೆ ಈಗಾಗಲೇ ಹಲವು ಅವಕಾಶಗಳು ಸಿಕ್ಕಿತ್ತು. ಹೆಚ್ಚಿನ ಸಂದರ್ಭದಲ್ಲಿ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕರೂ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ.
ಆಡುವ ಬಳಗದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಅವರಿಗೆ ಅದಕ್ಕೆ ತಕ್ಕ ಪ್ರದರ್ಶನ ನೀಡಲು ಸಾಧ‍್ಯವಾಗಿರಲಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ವಿಫಲರಾಗಿದ್ದರು. ಹೀಗಾಗಿ ಅವರಿಗೆ ಮತ್ತೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗಬೇಕಾದರೆ ಈ ಏಕದಿನ ಪಂದ್ಯದಲ್ಲಿ ಸಾಮರ್ಥ್ಯ ಸಾಬೀತುಪಡಿಸಲೇಬೇಕಿತ್ತು.
ತಮಗೆ ಸಿಕ್ಕ ಕೊನೆಯ ಅವಕಾಶವನ್ನು ಸಂಜು ಸರಿಯಾಗಿಯೇ ಬಳಸಿಕೊಂಡರು. ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಸಾಕಷ್ಟು ಪೈಪೋಟಿಯಿದೆ. ಹೀಗಾಗಿ ಉತ್ತಮ ಪ್ರದರ್ಶನ ನೀಡಲೇಬೇಕಿತ್ತು. ಶತಕ ಸಿಡಿಸುವ ಮೂಲಕ ಭಾರತ ತಂಡಕ್ಕೆ ಉತ್ತಮ ಮೊತ್ತ ಕೊಡಿಸಿದ್ದಲ್ಲದೆ, ತಮ್ಮ ವೃತ್ತಿ ಜೀವನವನ್ನೂ ಸಂಜು ಉಳಿಸಿಕೊಂಡಿದ್ದಾರೆ.