ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ನಾಯಕ ರೋಹಿತ್ ಶರ್ಮಾ ಮಾಡಿದ ಕೆಲಸವೊಂದು ಈಗ ಅವರಿಗೇ ಮುಳುವಾಗಿದೆ. ಅವರ ಮೇಲೆ ಈಗ ಧ್ವಜಕ್ಕೆ ಅಗೌರವ ತೋರಿದ ಆರೋಪ ಕೇಳಿಬಂದಿದೆ.
ಟಿ20 ವಿಶ್ವಕಪ್ ಗೆದ್ದ ರೋಹಿತ್ ಶರ್ಮಾ ಅಸಂಖ್ಯಾತ ಭಾರತೀಯ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾಗಿದ್ದರು. ಟೀಂ ಇಂಡಿಯಾ ಕಂಡ ಬೆಸ್ಟ್ ಕ್ಯಾಪ್ಟನ್ ಎಂದು ಎಲ್ಲರೂ ಹೊಗಳಿದ್ದರು. ಆದರೆ ವಿಶ್ವಕಪ್ ಗೆದ್ದ ಕ್ಷಣದಲ್ಲಿ ರೋಹಿತ್ ಭಾರತದ ಧ್ವಜವನ್ನು ಬಾರ್ಬಡೋಸ್ ಮೈದಾನದಲ್ಲಿ ಊರಲು ಪ್ರಯತ್ನಿಸಿದ್ದರು. ಈ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಆದರೆ ರೋಹಿತ್ ಈ ನಡೆ ಅವರಿಗೇ ಮುಳುವಾಗಿದೆ. ಈ ಫೋಟೋವನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ರೋಹಿತ್ ಧ್ವಜ ನೆಡಲು ಪ್ರಯತ್ನಿಸುವಾಗ ಅದರ ತುದಿ ನೆಲಕ್ಕೆ ತಾಕಿತ್ತು. ಭಾರತ ಧ್ವಜ ಸಂಹಿತೆ ಪ್ರಕಾರ ನಮ್ಮ ರಾಷ್ಟ್ರೀಯ ಧ್ವಜ ಯಾವುದೇ ಕಾರಣಕ್ಕೂ ನೆಲಕ್ಕೆ ತಾಕದಂತೆ, ನೀರಿನಲ್ಲಿ ಮುಳುಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.
ಆದರೆ ರೋಹಿತ್ ಧ್ವಜ ನೆಡುವಾಗ ನೆಲಕ್ಕೆ ತಾಕಿದ್ದು ಸಂಹಿತೆಯ ಉಲ್ಲಂಘನೆ ಜೊತೆಗೆ ಧ್ವಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದಾರೆ. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನವಾಗಿದ್ದು, ತಕ್ಷಣವೇ ರೋಹಿತ್ ಈ ಫೋಟೋವನ್ನು ಸೋಷಿಯಲ್ ಮೀಡಿಯಾದಿಂದ ಕಿತ್ತು ಹಾಕಬೇಕು ಎಂದು ಆರೋಪಿಸಲಾಗಿದೆ.