ಢಾಕಾ: ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯವನ್ನು ಸೋತು ಸರಣಿ ಕಳೆದುಕೊಂಡಿರಬಹುದು. ಆದರೆ ಈ ಹೀನಾಯ ಸೋಲಿನ ನಡುವೆಯೂ ಕ್ರಿಕೆಟ್ ಲೋಕ ನಾಯಕ ರೋಹಿತ್ ಶರ್ಮಾ ಸಾಹಸವನ್ನು ಕೊಂಡಾಡಿದ್ದಾರೆ.
ನಿನ್ನೆ ಫೀಲ್ಡಿಂಗ್ ಮಾಡುವಾಗ ಹೆಬ್ಬರಳಿಗೆ ಗಾಯ ಮಾಡಿಕೊಂಡ ರೋಹಿತ್ ಮೈದಾನದಿಂದ ಹೊರ ನಡೆದಿದ್ದರು. ಬಳಿಕ ಅವರು ಆರಂಭಿಕರಾಗಿಯೂ ಕಣಕ್ಕಿಳಿದಿರಲಿಲ್ಲ. ಆದರೆ ತಂಡ ಸಂಕಷ್ಟದಲ್ಲಿ ಎಂದಾಗ ಬ್ಯಾಂಡೇಜ್ ಕಟ್ಟಿಕೊಂಡೇ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ ರೋಹಿತ್ ಕೇವಲ 28 ಎಸೆತಗಳಿಂದ ಅಜೇಯ 51 ರನ್ ಚಚ್ಚಿದರು. ಕೊನೆಯ ಓವರ್ ನಲ್ಲಿ 20 ರನ್ ಅಗತ್ಯವಿದ್ದಾಗ 2 ಬೌಂಡರಿ, 1 ಸಿಕ್ಸರ್ ಸಿಡಿಸಿ ರೋಚಕ ಘಟ್ಟಕ್ಕೆ ತಲುಪಿಸಿದರು. ಆದರೆ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಲಾಗದೇ ಸೋತರು.
ನೋವಿನ ನಡುವೆಯೂ ಬೀಡು ಬೀಸಾಗಿ ರನ್ ಚಚ್ಚಿದ ರೋಹಿತ್ ಸಾಹಸವನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಹಿಂದೆ ದವಡೆ ಗಾಯವಾಗಿದ್ದರೂ ಬ್ಯಾಂಡೇಜ್ ಕಟ್ಟಿಕೊಂಡು ಬೌಲಿಂಗ್ ಮಾಡಿದ್ದ ಅನಿಲ್ ಕುಂಬ್ಳೆಗೆ ಹೋಲಿಸಿದ್ದಾರೆ. ದುರದೃಷ್ಟವಶಾತ್ ಟೀಂ ಇಂಡಿಯಾ 5 ರನ್ ಗಳಿಂದ ಸೋತು ಸರಣಿ ಕಳೆದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತ್ತು. ಭಾರತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ವೇಳೆ ರೋಹಿತ್ ನಿನ್ನೆ ತಂಡಕ್ಕೆ ಗೆಲುವು ಕೊಡಿಸಿದ್ದರೆ ಈ ಇನಿಂಗ್ಸ್ ಕ್ರಿಕೆಟ್ ಇತಿಹಾಸದಲ್ಲೇ ಸ್ಮರಣೀಯವಾಗುತ್ತಿತ್ತು.