Publish Date: Mon, 22 Mar 2021 (09:31 IST)
Updated Date: Mon, 22 Mar 2021 (09:33 IST)
ಪುಣೆ: ಟಿ20 ಕ್ರಿಕೆಟ್ ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಫಾರ್ಮ್ ಪ್ರದರ್ಶಿಸುವಲ್ಲಿ ವಿಫಲರಾದ ಕೆಎಲ್ ರಾಹುಲ್ ಈಗ ತಂಡದ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಸ್ವತಃ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದು ಬೃಹತ್ ಮೊತ್ತ ಕಲೆ ಹಾಕಿದ್ದರು. ಹೀಗಾಗಿ ಇನ್ನು ಮುಂದೆ ಇವರೇ ಖಾಯಂ ಆರಂಭಿಕರಾಗಲಿ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಇದು ನಿಜವಾದರೆ ರಾಹುಲ್ ಗೆ ಟಿ20 ತಂಡದಲ್ಲಿ ಸ್ಥಾನ ಇಲ್ಲವಾಗುತ್ತದೆ.
ಆದರೆ ಹಾಗಂತ ರಾಹುಲ್ ರನ್ನು ತಂಡದಿಂದ ಹೊರಗಿಟ್ಟಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಅಂತಿಮ ಪಂದ್ಯಕ್ಕೆ ಒಬ್ಬ ಹೆಚ್ಚುವರಿ ಬೌಲರ್ ನ್ನು ಬಳಸಲು ತೀರ್ಮಾನಿಸಿದ್ದೆವು. ಇದಕ್ಕೆ ಒಬ್ಬ ಬ್ಯಾಟ್ಸ್ ಮನ್ ನ್ನು ಹೊರಗಿಡುವುದು ಅನಿವಾರ್ಯವಾಗಿತ್ತು. ದುರಾದೃಷ್ಟವಶಾತ್ ರಾಹುಲ್ ಸ್ಥಾನ ಬಿಟ್ಟುಕೊಡಬೇಕಾಯಿತು. ಆದರೆ ಇದು ಶಾಶ್ವತವಲ್ಲ. ಮುಂದಿನ ದಿನಗಳಲ್ಲಿ ಅವರು ತಂಡಕ್ಕೆ ಬರಬಹುದು ಎಂದು ರೋಹಿತ್ ಹೇಳಿದ್ದಾರೆ.