Publish Date: Wed, 01 Mar 2023 (09:20 IST)
Updated Date: Wed, 01 Mar 2023 (09:32 IST)
ಮುಂಬೈ: ಕಳೆದ ಡಿಸೆಂಬರ್ ನಲ್ಲಿ ಕಾರು ಅಪಘಾತಕ್ಕೀಡಾಗಿ ಇದೀಗ ಚೇತರಿಸಿಕೊಳ್ಳುತ್ತಿರುವ ಕ್ರಿಕೆಟಿಗ ರಿಷಬ್ ಪಂತ್ ಮೊದಲ ಬಾರಿಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ಇದೀಗ ತನಗೆ ಸಣ್ಣ ಪುಟ್ಟ ವಿಚಾರಗಳೂ ದೊಡ್ಡ ಸಾಧನೆ ಎನಿಸುತ್ತಿದೆ, ಸಣ್ಣ ವಿಚಾರಗಳೂ ಖುಷಿಕೊಡುತ್ತಿವೆ ಎಂದು ರಿಷಬ್ ಪಂತ್ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ನಾನು ನನ್ನಷ್ಟಕ್ಕೇ ಬ್ರಷ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವುದೇ ಖುಷಿಯ ವಿಚಾರ. ಮೊದಲೆಲ್ಲಾ ಸಣ್ಣ ಪುಟ್ಟ ವಿಚಾರದಲ್ಲಿ ಏನಿದೆ ಮಹಾ ಎಂದುಕೊಂಡಿದ್ದೆ. ಆದರೆ ಈಗ ಇಂತಹ ಸಣ್ಣ ಪುಟ್ಟ ವಿಚಾರಗಳೇ ನನಗೆ ಖುಷಿಕೊಡುತ್ತಿವೆ, ಸಾಧನೆ ಎನಿಸುತ್ತಿದೆ. ನಾನೀಗ ಹಣ್ಣುಗಳನ್ನು, ಜ್ಯೂಸ್ ಸೇವಿಸುತ್ತಿದ್ದೇನೆ. ಕೆಲವು ಸಮಯ ಬಿಸಿಲಿಗೆ ಮೈ ಒಡ್ಡಿ ಕೂರುತ್ತೇನೆ. ಸದ್ಯಕ್ಕೆ ಸ್ಟಿಕ್ ಸಹಾಯವಿಲ್ಲದೇ ಸರಿಯಾಗಿ ನಡೆಯುವುದೇ ನನ್ನ ಗುರಿ. ಅಪಘಾತವಾದ ಬಳಿಕ ನಾನು ಪ್ರತೀ ಕ್ಷಣವನ್ನು ದೇವರ ಉಡುಗೊರೆ ಎಂದುಕೊಂಡಿದ್ದೇನೆ. ಪ್ರತೀ ಕ್ಷಣವನ್ನೂ ಎಂಜಾಯ್ ಮಾಡಲು ಕಲಿತಿದ್ದೇನೆ ಎಂದಿದ್ದಾರೆ. ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಸೌರವ್ ಗಂಗೂಲಿ ಪಂತ್ ಇನ್ನು ಎರಡು ವರ್ಷ ಕ್ರಿಕೆಟ್ ಆಡಲು ಸಾಧ‍್ಯವಾಗದು ಎಂದಿದ್ದರು.