ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ
ಇಂದು ಭಾರತೀಯ ಬೌಲರ್ ಮೊಹಮ್ಮದ್ ಸಿರಾಜ್ ಗೆ ಅನ್ಯಾಯವಾಗಿದ್ದಕ್ಕೆ ವಿಕೆಟ್ ಕೀಪರ್ ರಿಷಬ್ ಪಂತ್ ಮೈದಾನದಲ್ಲೇ ಕ್ಷಮೆ ಕೇಳಿದರು. ಅಷ್ಟಕ್ಕೂ ಅಂತಹದ್ದೇನಾಯ್ತು ಇಲ್ಲಿದೆ ನೋಡಿ ವಿವರ.
ಎರಡನೇ ದಿನವಾದ ಇಂದು ಭಾರತ ಮೊದಲ ಇನಿಂಗ್ಸ್ ನಲ್ಲಿ 376 ರನ್ ಗಳಿಗೆ ಆಲೌಟ್ ಆಯಿತು. ನಿನ್ನೆ 86 ರನ್ ಗಳಿಸಿ ಶತಕದ ನಿರೀಕ್ಷೆಯಲ್ಲಿದ್ದ ರವೀಂದ್ರ ಜಡೇಜಾ ಇಂದು ಒಂದೂ ರನ್ ಗಳಿಸದೇ ಔಟಾದರು. ಇದರಿಂದ ಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು. ಆದರೆ ಅಶ್ವಿನ್ ಅಂತಿಮವಾಗಿ 113 ರನ್ ಗಳಿಸಿ ಔಟಾದರು.
ಇದೀಗ ಬಾಂಗ್ಲಾ ಮೊದಲ ಇನಿಂಗ್ಸ್ ಆರಂಭಿಸಿದ್ದು ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡು 26 ರನ್ ಗಳಿಸಿ ಸಂಕಷ್ಟದಲ್ಲಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ ಮೊದಲ ಓವರ್ ನಲ್ಲೇ ಶದ್ಮಾನ್ ಇಸ್ಲಾಮ್ ರನ್ನು 2 ರನ್ ಗೆ ಕ್ಲೀನ್ ಬೌಲ್ಡ್ ಮಾಡಿದರು. ಅದಾದ ಬಳಿಕ ಆಕಾಶ್ ದೀಪ್ ಸಿಂಗ್ 2 ವಿಕೆಟ್ ಕಬಳಿಸಿದರು.
ಆದರೆ ಈ ನಡುವೆ ಮೊಹಮ್ಮದ್ ಸಿರಾಜ್ ಗೆ ವಿಕೆಟ್ ಸಿಗಬೇಕಿತ್ತು. ಅವರು ಎಸೆದ ಎಸೆತವೊಂದು ಎಲ್ ಬಿಡಬ್ಲ್ಯು ಆಗುವುದರಲ್ಲಿತ್ತು. ಆದರೆ ಅಂಪಾಯರ್ ನಾಟೌಟ್ ನೀಡಿದರು. ವಿಕೆಟ್ ಕೀಪರ್ ರಿಷಬ್ ಪಂತ್ ಸಲಹೆ ಕೇಳಿದ ನಾಯಕ ರೋಹಿತ್ ಶರ್ಮಾ ಬಾಲ್ ಹೈಟ್ ಲ್ಲಿತ್ತು ಎಂದು ಡಿಆರ್ ಎಸ್ ಗೂ ಮನವಿ ಸಲ್ಲಿಸಲಿಲ್ಲ. ಆದರೆ ಟಿವಿ ರಿಪ್ಲೇ ನೋಡಿದಾಗ ಎಲ್ ಬಿ ಆಗಿದ್ದು ಸ್ಪಷ್ಟವಾಗಿತ್ತು.
ಹೀಗಾಗಿ ಮೊಹಮ್ಮದ್ ಸಿರಾಜ್ ಹತಾಶರಾದರೆ, ಇತ್ತ ರಿಷಬ್ ಪಂತ್ ಸರಿಯಾಗಿ ಸಲಹೆ ನೀಡದೇ ಇದ್ದಿದ್ದಕ್ಕೆ ಮೈದಾನದಲ್ಲೇ ಕೈ ಎತ್ತಿ ಸಿರಾಜ್ ಗೆ ಕ್ಷಮೆ ಕೇಳಿದರು. ಅತ್ತ ರೋಹಿತ್ ಕೂಡಾ ಹತಾಶೆಗೊಂಡು ಒಂದು ಸ್ಮೈಲ್ ಕೊಟ್ಟರು.