Publish Date: Tue, 27 May 2025 (09:35 IST)
Updated Date: Tue, 27 May 2025 (09:38 IST)
ಲಕ್ನೋ: ಐಪಿಎಲ್ 2025 ರಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ ಸಿಬಿ ಪಂದ್ಯವಾಡಲಿದ್ದು ಇಂದಿನ ಪಂದ್ಯವನ್ನು ಆರ್ ಸಿಬಿ ಸೋಲುವಂತೆಯೇ ಇಲ್ಲ.
ಕಳೆದ ಪಂದ್ಯವನ್ನೂ ಆರ್ ಸಿಬಿ ಲಕ್ನೋ ಮೈದಾನದಲ್ಲೇ ಆಡಿತ್ತು. ಆದರೆ ಇದೇ ಮೊದಲ ಬಾರಿಗೆ ಈ ಕೂಟದಲ್ಲಿ ತವರಿನ ಹೊರತಾದ ಅಂಕಣದಲ್ಲಿ ಸೋತು ಆಘಾತ ಅನುಭವಿಸಿತ್ತು. ಟೇಬಲ್ ಟಾಪರ್ ಆಗುವ ಅವಕಾಶ ಹೊಂದಿದ್ದ ಆರ್ ಸಿಬಿ ಮೂರನೇ ಸ್ಥಾನಕ್ಕೆ ಕುಸಿದಿತ್ತು.
ಇದೀಗ ಪ್ಲೇ ಆಫ್ ಹಂತಕ್ಕೇರಿರುವ ಆರ್ ಸಿಬಿ ಅಗ್ರ ಸ್ಥಾನ ಕಾಯ್ದುಕೊಳ್ಳಬೇಕು ಎಂದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕು. ಒಂದು ವೇಳೆ ಇಂದು ಸೋತರೆ ಆರ್ ಸಿಬಿ ಕ್ವಾಲಿಫೈಯರ್ ಬದಲು ಎಲಿಮಿನೇಟರ್ ಪಂದ್ಯ ಆಡಬೇಕಾಗುತ್ತದೆ. ಹೀಗಾಗಿ ಆರ್ ಸಿಬಿ ಪಾಲಿಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿರಲಿದೆ. ಆರ್ ಸಿಬಿ ಈಗ ಮೂವರು ಆಟಗಾರರು ಸೇರ್ಪಡೆಯಾಗಿರುವುದು ಹೊಸ ಚೈತನ್ಯ ಮೂಡಿಸಿದಂತಾಗಿದೆ.
ಕಳೆದ ಪಂದ್ಯದಲ್ಲಿ ನಾಯಕ ರಜತ್ ಪಾಟೀದಾರ್ ಅನುಪಸ್ಥಿತಿಯಲ್ಲಿ ಜಿತೇಶ್ ಶರ್ಮಾ ತಂಡವನ್ನು ಮುನ್ನಡೆಸಿದ್ದರು. ಅವರ ಕೆಲವು ನಿರ್ಧಾರಗಳು ಟೀಕೆಗೂ ಒಳಗಾಗಿತ್ತು. ಈ ಪಂದ್ಯದಲ್ಲಿ ಆರ್ ಸಿಬಿ ತಪ್ಪುಗಳನ್ನು ತಿದ್ದಿಕೊಂಡು ಆಡದೇ ಹೋದಲ್ಲಿ ನಿರ್ಣಾಯಕ ಹಂತದಲ್ಲಿ ಬೀಳುವ ಚಾಳಿ ಮುಂದುವರಿಸಿದಂತಾಗುತ್ತದೆ. ಈ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗುವುದು.