ರವೀಂದ್ರ ಜಡೇಜಾ ಅವರಿಗೆ ಕುದುರೆಗಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಕಳೆದ ಏಪ್ರಿಲ್‌ನಲ್ಲಿ ರಿವಾ ಸೋಲಂಕಿ ಜತೆ ಜಡೇಜಾ ಮದುವೆಯಲ್ಲಿ ಜಡೇಜಾ ಸಂಬಂಧಿಯೊಬ್ಬ ವಿವಾಹದ ಸಂಭ್ರಮಾಚರಣೆಗೆ ಹಲವು ಸುತ್ತು ಗುಂಡು ಹಾರಿಸಿದಾಗ ಜಡೇಜಾ ಕುಳಿತಿದ್ದ ಕುದುರೆ ಬೆಚ್ಚಿಬಿದ್ದಿತ್ತು. ಜಡೇಜಾ ಕೆಳಕ್ಕೆ ಬೀಳುವುದರಿಂದ ಸ್ವಲ್ಪದರಲ್ಲಿ ಪಾರಾಗಿದ್ದರು. ಈ ಬಾರಿ ಜಡೇಜಾ ಮತ್ತೊಂದು ದುಸ್ಸಾಹಸಕ್ಕೆ ಕೈಹಾಕಿದರು. ಗಿರ್ ಅರಣ್ಯದಲ್ಲಿನ ಸಫಾರಿಯಲ್ಲಿ ನಿಯಮವನ್ನು ಉಲ್ಲಂಘಿಸಿ ಜೀಪ್‌ನಿಂದ ಇಳಿದ ಜಡೇಜಾ ಸಿಂಹಗಳ ಹಿನ್ನೆಲೆಯಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದರು.
ಜಡೇಜಾ ಮತ್ತು ಅವರ ಪತ್ನಿ ಜುನಾಗಢ್ ಜಿಲ್ಲೆಯ ಸಸಾನ್ ಗಿರ್‌ನಲ್ಲಿ ಸಿಂಹಗಳ ಜತೆ ಫೋಸ್ ನೀಡುತ್ತಿರುವುದು ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ಫೋಟೊಗಳು ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದು, ಭಾರತದ ಕ್ರಿಕೆಟರ್ ಸಫಾರಿ ಜೀಪ್‌ನಿಂದ ಕೆಳಕ್ಕಿಳಿದು ಸೆಲ್ಫೀ ಕ್ಲಿಕ್ಕಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆಂದು ಆರೋಪಿಸಿದ್ದಾರೆ. ಈ ಕುರಿತು ತನಿಖೆಗೂ ಆದೇಶ ನೀಡಲಾಗಿದೆ.
ಗಿರ್ ರಾಷ್ಟ್ರೀಯ ಉದ್ಯಾನವು ಸಂರಕ್ಷಿತ ಅರಣ್ಯವಾಗಿದ್ದು ಪ್ರವಾಸಿಗಳಿಗೆ ವಾಹನಗಳಿಂದ ಕೆಳಕ್ಕಿಳಿಯಲು ಅವಕಾಶವಿಲ್ಲ. ಆದರೆ ಜಡೇಜಾ ಅರಣ್ಯದಲ್ಲಿ ವಾಹನದಿಂದ ಕೆಳಕ್ಕಿಳಿದು ಸಿಂಹಗಳ ಜತೆ ಸೆಲ್ಫಿ ತೆಗೆದಿದ್ದು ಅರಣ್ಯಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ