ಚೆನ್ನೈ: ರವಿಚಂದ್ರನ್ ಅಶ್ವಿನ್ ಗೆ ಅವರಿಬ್ಬರೂ ಹೊಸಬರೇನಲ್ಲ. ಟೀಂ ಇಂಡಿಯಾದ ಸಹವರ್ತಿಗಳೇ. ಹಾಗಂತ ರವಿಚಂದ್ರನ್ ಕೂಡಾ ಈ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ ಅಶ್ವಿನ್ ಮಾತ್ರ ತಮ್ಮ ಎದುರಾಳಿ ಕಮ್ ಸಹವರ್ತಿಗಳ ಕಾಲೆಳೆಯುವುದನ್ನು ಮರೆಯಲಿಲ್ಲ.
ನಾವು ಹೇಳಲು ಹೊರಟಿರುವುದು ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಮಿಳುನಾಡು ವಿರುದ್ಧ ಸೋತಿರುವುದರ ಬಗ್ಗೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಮಿಳುನಾಡು ವಿರುದ್ಧ 7 ವಿಕೆಟ್ ಗಳಿಂದ ಸೋತಿದೆ. ಈ ಪಂದ್ಯದಲ್ಲಿ ಕರ್ನಾಟಕ ಟಾಸ್ ಸೋತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಟೀಂ ಇಂಡಿಯಾದಲ್ಲಿ ಇತ್ತೀಚೆಗಷ್ಟೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಕೆಎಲ್ ರಾಹುಲ್, ತ್ರಿಶತಕದಾರಿ ಕರುಣ್ ನಾಯರ್ ಇದ್ದರೂ ಬ್ಯಾಟಿಂಗ್ ವೈಫಲ್ಯ ಕಂಡಿತ್ತು. ಇದು ಅಶ್ವಿನ್ ತಮಾಷೆ ಮಾಡಲು ಕಾರಣವಾಗಿದ್ದು.
ಟ್ವಿಟರ್ ನಲ್ಲಿ ಕರುಣ್ ನಾಯರ್ ಗೆ ತಮಿಳು ಭಾಷೆಯಲ್ಲೇ ಕಾಲೆಳೆದ ಅಶ್ವಿನ್, “ಎನ್ನಾ ತಂಬಿ? ಟಾಸ್ ಸೋತಿರಿ. ರಾಹುಲ್ 4 ಕ್ಕೆ ಪೆವಿಲಿಯನ್ ಸೇರಿಕೊಂಡ. ಬೇಜಾರು ಮಾಡ್ಕೋಬೇಡ. ಮೊದಲೇ ಮಾತಾಡಿದಂತೆ ಪಂದ್ಯ ಮುಗಿದ ಕೂಡಲೇ ಭೇಟಿಯಾಗೋಣ” ಎಂದು ಅಶ್ವಿನ್ ಕರುಣ್ ಗೆ ಟ್ವೀಟ್ ಮಾಡಿದ್ದಾರೆ.
ಅಂತೂ ಅಶ್ವಿನ್ ಟ್ವಿಟರ್ ಮತ್ತೊಮ್ಮೆ ಸುದ್ದಿ ಮಾಡಿದೆ. ಘಟಾನುಘಟಿಗಳಿದ್ದೂ ಮಣ್ಣು ಮುಕ್ಕಿದರು ಎಂಬ ಅಪಮಾನಕ್ಕೆ ಕರ್ನಾಟಕ ಗುರಿಯಾಗಿದೆ. ಅತ್ತ ರವಿಚಂದ್ರನ್ ಅಶ್ವಿನ್ ಇಲ್ಲದಿದ್ದರೇನಂತೆ, ಇನ್ನೊಬ್ಬ ಅಶ್ವಿನ್ ಕರ್ನಾಟಕದ ಹುಡುಗರ ಬೆನ್ನೆಲುಬು ಕಿತ್ತಿದ್ದಾರೆ. ಇದರೊಂದಿಗೆ ಕರ್ನಾಟಕದ ಆಸೆಯೂ ಕಮರಿದೆ.
ಟೀಂ ಇಂಡಿಯಾದಲ್ಲಿ ಸದ್ದು ಮಾಡುತ್ತಿರುವ ಕರ್ನಾಟಕದ ಹುಡುಗರು ರಾಜ್ಯದ ರಕ್ಷಣೆಗೆ ಬರಲಿಲ್ಲ ಎನ್ನುವುದಷ್ಟೇ ಅಲ್ಲ. ಅವರನ್ನೇ ನೆಚ್ಚಿಕೊಂಡು ಇತರ ಆಟಗಾರರೂ ಆಟ ಮರೆತವರಂತೆ ಆಡಿದರೋ ಅಂತೂ ಕರ್ನಾಟಕ ಬಲಿಷ್ಠ ತಂಡವೆನಿಸಿಕೊಂಡು ಈಗ ಹೀನಾಯವಾಗಿ ಸೋತು ನಗೆಪಾಟಲಿಗೀಡಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ