Publish Date: Tue, 29 Jan 2019 (09:17 IST)
Updated Date: Tue, 29 Jan 2019 (09:19 IST)
ಬೆಂಗಳೂರು: ಚೇತೇಶ್ವರ ಪೂಜಾರರನ್ನು ಔಟ್ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಅವರನ್ನು ಔಟ್ ಮಾಡಿದರೂ ತೀರ್ಪು ಕೊಡದೇ ಖಳನಾಯಕನಾದ ಅಂಪಾಯರ್ ಬಗ್ಗೆ ಏನು ಹೇಳುವುದು. ಅದೂ ಎರಡೆರಡು ಬಾರಿ.
ಕರ್ನಾಟಕ ಮತ್ತು ಸೌರಾಷ್ಟ್ರ ನಡುವೆ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕಕ್ಕೆ 5 ವಿಕೆಟ್ ಗಳ ಸೋಲಾಯಿತು. ಆದರೆ ಇಲ್ಲಿ ಸೋಲು-ಗೆಲುವಿಗಿಂತ ಅಂಪಾಯರ್ ಮತ್ತು ಸೌರಾಷ್ಟ್ರ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ ನಡತೆಯೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅದೂ ಪಂದ್ಯದ ಎರಡೂ ಇನಿಂಗ್ಸ್ ನಲ್ಲಿ ಪೂಜಾರ ಮೇಲೆ ಅಂಪಾಯರ್ ತೋರಿದ ಕೃಪೆ ಕರ್ನಾಟಕದ ಸೋಲಿಗೆ ಕಾರಣವಾಗಿದೆ.
ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿನ ಅಂಚಿಗೆ ತಗುಲಿದ್ದರೂ ಅಂಪಾಯರ್ ಔಟ್ ಕೊಡಲಿಲ್ಲ. ಇದು ತಿಳಿದೂ ಪೂಜಾರ ಕೂಡಾ ಜಂಟಲ್ ಮೆನ್ ನಡತೆ ತೋರದೇ ಇನಿಂಗ್ಸ್ ಮುಂದುವರಿಸಿದ್ದರು. ದ್ವಿತೀಯ ಇನಿಂಗ್ಸ್ ನಲ್ಲೂ ವಿನಯ್ ಕುಮಾರ್ ಬೌಲಿಂಗ್ ನಲ್ಲಿ ಮತ್ತೆ ಬ್ಯಾಟ್ ನ ಅಂಚಿಗೆ ಸವರಿ ಕೀಪರ್ ಕೈಗೆ ಬಾಲ್ ಸೇರಿತ್ತು.
ಆಗಲೂ ಅದೇ ಕತೆ. ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಅಂಗಲಾಚಿದರೂ ಪೂಜಾರ ಆಗಲೀ, ಅಂಪಾಯರ್ ಆಗಲೀ ಕಿವುಡರಾದರು. ಇದರಿಂದಾಗಿ ಇದೀಗ ಅಂಪಾಯರಿಂಗ್ ಗುಣಮಟ್ಟ ಮತ್ತು ಒಬ್ಬ ಹಿರಿಯ ಆಟಗಾರನಾಗಿ ಸನ್ನಡತೆ ಮರೆತ ಪೂಜಾರ ಬಗ್ಗೆ ಕರ್ನಾಟಕ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದೇನೇ ಇದ್ದರೂ ಕೊನೆಯಲ್ಲಿ ಮುಖ್ಯವಾಗುವುದು ಫಲಿತಾಂಶ ಮಾತ್ರ ಎನ್ನುವುದು ವಿಪರ್ಯಾಸ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ