Publish Date: Wed, 22 Apr 2026 (23:46 IST)
Updated Date: Wed, 22 Apr 2026 (23:48 IST)
ಲಕ್ನೋ: ಸತತ ಎರಡು ಪಂದ್ಯಗಳಲ್ಲಿ ಸೋತಿದ್ದ ರಾಜಸ್ಥಾನ ರಾಯಲ್ಸ್ ತಂಡವು ಗೆಲುವಿನ ಲಯಕ್ಕೆ ಮರಳಿದೆ. ಬೌಲಿಂಗ್, ಅತ್ಯುತ್ತಮ ಫೀಲ್ಡಿಂಗ್ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ ತಂಡವು 40 ರನ್‌ಗಳ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ರಾಜಸ್ಥಾನ 6 ವಿಕೆಟ್ ನಷ್ಟನಕ್ಕೆ 159 ರನ್ ಹೊಡೆಯಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಲಕ್ನೋ 17.6 ಓವರ್‌ಗಳಲ್ಲಿ 119 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲನ್ನು ಒಪ್ಪಿಕೊಂಡಿತು.
7 ಪಂದ್ಯಗಳಿಂದ 10 ಅಂಕ, 0.790 ನೆಟ್ ರನ್ ರೇಟ್‌ನೊಂದಿಗೆ ರಾಜಸ್ಥಾನ ಎರಡನೇ ಸ್ಥಾನಕ್ಕೆ ಜಿಗಿಯಿತು. 6 ಪಂದ್ಯಗಳಿಂದ 8 ಅಂಕ 1.171 ನೆಟ್ ರನ್ ರೇಟ್ ಹೊಂದಿರುವ ಬೆಂಗಳೂರು ಮೂರನೇ ಸ್ಥಾನಕ್ಕೆ ಜಾರಿದೆ.
ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ 32ನೇ ಐಪಿಎಲ್ ಪಂದ್ಯದಲ್ಲಿ ಲಕ್ನೊ ತಂಡದ ನಾಯಕ ರಿಷಭ್ ಪಂತ್ ಟಾಸ್ ಗೆದ್ದು ರಾಜಸ್ಥಾನ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ರವೀಂದ್ರ ಜಡೇಜ (ಔಟಾಗದೆ 43, 29 ಎಸೆತ, 2 ಬೌಂಡರಿ, 1 ಸಿಕ್ಸರ್) ಅವರ ಸಾಹಸದಿಂದ ರಾಜಸ್ಥಾನ ತಂಡವು ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿತು.
ಗೆಲ್ಲಲು 160 ರನ್ ಗುರಿ ಪಡೆದ ಲಕ್ನೊ ತಂಡವು 18 ಓವರ್ ಗಳಲ್ಲಿ ಕೇವಲ 119 ರನ್ ಗಳಿಸಿ ಆಲೌಟ್ ಆಯಿತು. ಲಕ್ನೊ ತಂಡವು 2.5 ಓವರ್ ಗಳಲ್ಲಿ 11 ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತು. ಆಯುಷ್ ಬದೋನಿ, ನಾಯಕ ರಿಷಭ್ ಪಂತ್ ಹಾಗೂ ಮರ್ಕ್ರಮ್ ಶೂನ್ಯಕ್ಕೆ ಔಟಾದರು. ಮಾರ್ಷ್ ಹಾಗೂ ಪೂರನ್ ನಾಲ್ಕನೇ ವಿಕೆಟ್ ಗೆ 43 ರನ್ ಸೇರಿಸಿ ಇನ್ನಿಂಗ್ಸ್‌ನ್ನು ಪುನರ್‌ನಿರ್ಮಿಸಲು ಯತ್ನಿಸಿದರು.