Publish Date: Fri, 24 Nov 2023 (09:20 IST)
Updated Date: Fri, 24 Nov 2023 (09:20 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ನಿರಾಸಕ್ತಿ ತೋರಿಸಿರುವ ರಾಹುಲ್ ದ್ರಾವಿಡ್ ಈಗ ಐಪಿಎಲ್ ಕಣಕ್ಕೆ ಮರಳುವ ಸುದ್ದಿ ಕೇಳಿಬರುತ್ತಿದೆ.
ರಾಹುಲ್ ದ್ರಾವಿಡ್ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಮತ್ತೆ ತಂಡದ ಮುಖ್ಯ ಕೋಚ್ ಆಗಿ ಇನ್ನೊಂದು ಅವಧಿಗೆ ಮುಂದುವರಿಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈಗ ಅವರ ಸ್ಥಾನಕ್ಕೆ ಮತ್ತೊಬ್ಬ ಕೋಚ್ ಹುಡುಕಾಟ ನಡೆದಿದೆ.
ದ್ರಾವಿಡ್ ಈಗ ಐಪಿಎಲ್ ತಂಡವೊಂದಕ್ಕೆ ಕೋಚ್ ಆಗಿ ಬರಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಪ್ರಮುಖ ಫ್ರಾಂಚೈಸಿಯೊಂದು ದ್ರಾವಿಡ್ ಜೊತೆ ಮಾತುಕತೆಯೂ ನಡೆಸಿದೆ.
ರಾಹುಲ್ ದ್ರಾವಿಡ್ ಗೆ ಐಪಿಎಲ್ ಹೊಸದಲ್ಲ. ಈ ಮೊದಲು ಆರ್ ಸಿಬಿ, ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಐಪಿಎಲ್ ಆಡಿದ್ದರು. ರಾಜಸ್ಥಾನ್ ತಂಡದ ನಾಯಕನಾಗಿ, ಕೋಚ್ ಆಗಿ ಯಶಸ್ವಿಯಾಗಿ ಐಪಿಎಲ್ ವೃತ್ತಿ ಜೀವನ ನಡೆಸಿದ್ದರು. ಇದೀಗ ಮತ್ತೆ ಕೋಚ್ ಆಗಿ ಮರಳುವ ಇರಾದೆಯಲ್ಲಿದ್ದಾರೆ. ಮೂಲಗಳ ಪ್ರಕಾರ ಎರಡು ವರ್ಷಗಳಿಗೆ ಐಪಿಎಲ್ ತಂಡವೊಂದರ ಕೋಚ್ ಆಗಲು ಮಾತುಕತೆ ನಡೆದಿದೆಯಂತೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ದೊರೆಯಲಿದೆ.