ಬೇ ಓವಲ್: ದ.ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರಚಿನ್ ರವೀಂದ್ರ ದ್ವಿಶತಕ ಸಿಡಿಸಿ ಟೀಂ ಇಂಡಿಯಾ ಯುವ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 511 ರನ್ ಗೆ ಆಲೌಟ್ ಆಗಿತ್ತು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ ರಚಿನ್ ರವೀಂದ್ರ 366 ಎಸೆತಗಳಿಂದ 240 ರನ್ ಗಳಿಸಿದರು. ಇದು ಅವರ ವೃತ್ತಿ ಜೀವನದ ನಾಲ್ಕನೇ ಟೆಸ್ಟ್ ಪಂದ್ಯವಾಗಿತ್ತು. ಕೇವಲ ನಾಲ್ಕನೇ ಪಂದ್ಯಕ್ಕೇ ಅವರು ಚೊಚ್ಚಲ ದ್ವಿಶತಕ ಸಿಡಿಸಿ ಮಿಂಚಿದರು. ಅವರಿಗೆ ಸಾಥ್ ನೀಡಿದ ಕೇನ್ ವಿಲಿಯಮ್ಸನ್ 118 ರನ್ ಗಳಿಸಿ ಮಿಂಚಿದರು.
ರಚಿನ್ ರವೀಂದ್ರ ದಾಖಲೆ, ಯಶಸ್ವಿ ಜೈಸ್ವಾಲ್ ಸಾಲಿಗೆ ಸೇರ್ಪಡೆ
ಭಾರತೀಯ ಮೂಲದ ರಚಿನ್ ರವೀಂದ್ರ ಚೊಚ್ಚಲ ಶತಕವನ್ನೇ ದ್ವಿಶತಕವಾಗಿ ಮಾರ್ಪಡಿಸಿದರು. ಅವರ ಈ ಇನಿಂಗ್ಸ್ ನಿಂದಾಗಿ ಈ ಡಬ್ಲುಟಿಸಿ ಸರಣಿಯಲ್ಲಿ ದ್ವಿಶತಕ ಸಿಡಿಸಿದ ಭಾರತದ ಯಶಸ್ವಿ ಜೈಸ್ವಾಲ್ ಸಾಲಿಗೆ ಸೇರ್ಪಡೆಯಾದರು. ಜೈಸ್ವಾಲ್ ಕೂಡಾ ಇದೀಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ್ದರು. ಇದು ಅವರ ಐದನೇ ಪಂದ್ಯವಾಗಿದೆ. ಈ ಮೂಲಕ ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರನೆನಿಸಿಕೊಂಡಿದ್ದರು. ಈಗ ಆ ಸಾಲಿಗೆ ರಚಿನ್ ಸೇರಿಕೊಂಡಿದ್ದಾರೆ. ವಿಶೇಷವೆಂದರೆ ಇಬ್ಬರೂ ಒಂದೇ ಸಮಯಕ್ಕೆ ಈ ದಾಖಲೆ ಮಾಡಿದ್ದಾರೆ.
ಇತ್ತೀಚೆಗೆ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ವೇಳೆ ರಚಿನ್ ರವೀಂದ್ರ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದರು.