Publish Date: Fri, 07 Jun 2019 (10:17 IST)
Updated Date: Fri, 07 Jun 2019 (10:19 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ವಿಕೆಟ್ ಕೀಪರ್ ಧೋನಿ ಕೈಗೆ ಭಾರತದ ಅರೆಸೇನಾ ಪಡೆಯ ಚಿಹ್ನೆಯಿರುವ ಗ್ಲೌಸ್ ಧರಿಸಿರುವುದು ಇದೀಗ ವ್ಯಾಪಕ ವಿವಾದಕ್ಕೆ ಗುರಿಯಾಗಿದೆ.
ಅಭಿಮಾನಿಗಳು ಧೋನಿ ದೇಶಾಭಿಮಾನವನ್ನು ಕೊಂಡಾಡಿದರೆ, ಐಸಿಸಿ ಬಿಸಿಸಿಗೆ ಈ ಚಿಹ್ನೆಯನ್ನು ತೆಗೆಯಲು ಧೋನಿಗೆ ಸೂಚಿಸಲು ತಾಕೀತು ಮಾಡಿದೆ. ಬಿಸಿಸಿಐ ಕೂಡಾ ಇದೀಗ ಧೋನಿಗೆ ಚಿಹ್ನೆ ಬಳಸದಂತೆ ಸೂಚಿಸಿದೆ.
ಇದರ ಬೆನ್ನಲ್ಲೇ ಪಾಕ್ ಸಚಿವ ಫವಾದ್ ಚೌಧರಿ ಧೋನಿ ನಡೆಗೆ ಕೆಂಗಣ್ಣು ಬೀರಿದ್ದಾರೆ. ‘ಧೋನಿ ಇಂಗ್ಲೆಂಡ್ ಗೆ ಕ್ರಿಕೆಟ್ ಆಡಲು ಬಂದಿದ್ದು, ಮಹಾಭಾರತ ಮಾಡಲು ಅಲ್ಲ. ಭಾರತೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಎಂತಹಾ ಮೂರ್ಖತನದ ಚರ್ಚೆ ನಡೆಯುತ್ತಿದೆ. ಯುದ್ಧದ ಆಸೆಯಿದ್ದವರೆಲ್ಲಾ ರವಾಂಡಾಕ್ಕೋ ಸಿರಿಯಾಕ್ಕೋ ಯುದ್ಧ ಮಾಡಲು ಹೋಗಲಿ’ ಎಂದು ಫವಾದ್ ಕೆಂಡ ಕಾರಿದ್ದಾರೆ.