ಮುಂಬೈ: ಮುಂಬರುವ ಜೂನ್ ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಈಗಲೇ ತಂಡ ಕಟ್ಟುವ ಕೆಲಸ ಶುರು ಮಾಡಿದೆ.
ಈ ನಡುವೆ ಹಿರಿಯ ಕ್ರಿಕೆಟಿಗರನ್ನು ಪಕ್ಕಕ್ಕಿಟ್ಟು ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಬಿಸಿಸಿಐ ಚಿಂತನೆ ನಡೆಸಿದೆ. ಅದರ ಫಲವೆಂಬಂತೆ ಈಗಾಗಲೇ ಟಿ20 ಸರಣಿಗಳಲ್ಲಿ ಯುವ ಆಟಗಾರರಿಗೇ ಅವಕಾಶ ನೀಡಲಾಗುತ್ತದೆ.
ಈ ನಡುವೆ ವಿರಾಟ್ ಕೊಹ್ಲಿಯನ್ನು ಟಿ20 ವಿಶ್ವಕಪ್ ತಂಡದಿಂದ ಹೊರಗಿಡುವ ಬಗ್ಗೆ ಬಿಸಿಸಿಐ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಇದೀಗ ರೋಹಿತ್ ಶರ್ಮಾ ವಿಚಾರದಲ್ಲೂ ಅದೇ ನಿಲುವು ತೆಗೆದುಕೊಳ್ಳುವ ಸಾಧ‍್ಯತೆಯಿದೆ.
ರೋಹಿತ್ ಶರ್ಮಾ ಇತ್ತೀಚೆಗೆ ಬಿಸಿಸಿಐ ಜೊತೆ ನಡೆಸಿದ ಸಭೆಯಲ್ಲಿ ಟಿ20 ವಿಶ್ವಕಪ್ ನಲ್ಲಿ ತಮ್ಮ ಪಾತ್ರದ ಬಗ್ಗೆ ಈಗಲೇ ಸ್ಪಷ್ಟ ಚಿತ್ರಣ ಕೊಡಬೇಕು ಎಂದು ಕೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ರೋಹಿತ್ ಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಖಚಿತವೆಂದು ಈಗಲೇ ಹೇಳಲಾಗದು ಎಂದು ಸೂಚನೆ ನೀಡಲಿದೆ ಎನ್ನಲಾಗಿದೆ.