ದೆಹಲಿ: ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ವಿವಾದಾತ್ಮಕ ರೀತಿಯಲ್ಲಿ ಔಟಾಗಿದ್ದಕ್ಕೆ ನೆಟ್ಟಿಗರು ವಿಶಿಷ್ಟ ಐಡಿಯಾ ಕೊಟ್ಟಿದ್ದಾರೆ.
ಸಂಜು ಸ್ಯಾಮ್ಸನ್ 86 ರನ್ ಗಳಿಸಿದ್ದಾಗ ಅಂಪಾಯರ್ ನೀಡಿದ ವಿವಾದಾತ್ಮಕ ತೀರ್ಪಿನಿಂದ ಔಟಾಗಿ ನಿರ್ಗಮಿಸಬೇಕಾಯಿತು. ಇದರಿಂದ ರಾಜಸ್ಥಾನ್ ಸೋಲಬೇಕಾಯಿತು. ಸಂಜು ನೀಡಿದ ಕ್ಯಾಚ್ ನ್ನು ಫೀಲ್ಡರ್ ಪಡೆಯುವಾಗ ಕೊಂಚವೇ ಬೌಂಡರಿ ಗೆರೆ ಕಾಲು ತಾಕಿದೆ ಎಂಬುದು ಸಂಜು ವಾದವಾಗಿದೆ. ಟಿವಿ ರಿಪ್ಲೇಗಳಲ್ಲೂ ಇದು ಸಂಶಯಾಸ್ಪದವಾಗಿದೆ.
ರಿಪ್ಲೇ ನೋಡಿದ ಬಳಿಕವೂ ಅಂಪಾಯರ್ ಗಳು ಸಂಜು ಔಟ್ ಎಂದು ತೀರ್ಪು ನೀಡಿದ್ದರು. ಇದು ಅವರ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ಮೈದಾನದಲ್ಲೇ ಸಂಜು ಅಂಪಾಯರ್ ಜೊತೆ ವಾಗ್ವಾದಕ್ಕಿಳಿದರು. ಕೊನೆಗೆ ಅವರಿಗೆ ಈ ತಪ್ಪಿಗೆ 30 ಲಕ್ಷ ರೂ. ದಂಡವೂ ಬಿತ್ತು.
ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಯಿತು. ನೆಟ್ಟಿಗರು ಸಂಜು ರೀತಿ ವಿವಾದ ತಪ್ಪಿಸಲು ಈಗ ಐಡಿಯಾವೊಂದನ್ನು ನೀಡಿದ್ದಾರೆ. ಫೀಲ್ಡರ್ ಕಾಲು ಬೌಂಡರಿ ಗೆರೆಗೆ ತಾಕಿದೆಯೇ ಎಂದು ಪರಿಶೀಲಿಸಲು ಸ್ಟಂಪ್ ಗೆ ಅಳವಡಿಸುವ ಮಾದರಿಯಲ್ಲೇ ಬೌಂಡರಿ ಲೈನ್ ಗೂ ಎಲ್ ಇಡಿ ಲೈಟ್ ಅಳವಡಿಸಲಿ. ಫೀಲ್ಡರ್ ಗೆರೆ ಸ್ಪರ್ಶಿಸಿದರೆ ಲೈಟ್ ಆನ್ ಆಗಲಿ. ಆಗ ಇಂತಹ ಅನುಮಾನದ ಪ್ರಮೇಯವೇ ಬರಲ್ಲ ಎನ್ನುವುದು ನೆಟ್ಟಿಗರ ಅಭಿಪ್ರಾಯ.