ಜಿಂಬಾಬ್ವೆ ವಿರುದ್ಧ 2ನೇ ಟಿ 20 ಪಂದ್ಯದಲ್ಲಿ ತಮ್ಮ ಬೌಲರುಗಳು ಪ್ರದರ್ಶನ ನೀಡಿದ ರೀತಿಗೆ ಧೋನಿ ಸಂತಸಗೊಂಡಿದ್ದಾರೆ. ಬರೀಂದರ್ ಸ್ರಾನ್ ಟಿ 20 ಚೊಚ್ಚಲ ಪ್ರವೇಶದಲ್ಲಿ ನಾಲ್ಕು ವಿಕೆಟ್ ಕಬಳಿಸಿ ಶ್ರೇಷ್ಟ ಬೌಲಿಂಗ್ ಅಂಕಿಅಂಶ ಪ್ರದರ್ಶಿಸಿದ್ದಾರೆ. ಪ್ರವಾಸಿಗಳು ಜಿಂಬಾಬ್ವೆ ತಂಡವನ್ನು 99 ರನ್‌ಗೆ ನಿರ್ಬಂಧಿಸಿ ಸುಲಭವಾಗಿ ಗುರಿಯನ್ನು ನೋಲಾಸ್‌ಗೆ ಮುಟ್ಟಿದರು.
ಇದೊಂದು ದೊಡ್ಡ ಜಯ. ಬೌಲರ್‌ಗಳು ಸರಿಯಾದ ಲೆಂಗ್ತ್‌ನಲ್ಲಿ ಬೌಲ್ ಮಾಡಿದರು. ಇದು ಅದೇ ವಿಕೆಟ್‌ನಲ್ಲಿ ಮೂರನೇ ಪಂದ್ಯವಾಗಿದ್ದು ನಾವು ಟಾಸ್ ಗೆದ್ದಿದ್ದರೆ ಬ್ಯಾಟಿಂಗ್ ಆಯ್ಕೆ ಮಾಡುತ್ತಿದ್ದೆವು ಎಂದು ಧೋನಿ ಪಂದ್ಯದ ನಂತರದ ಸಮಾರಂಭದಲ್ಲಿ ಹೇಳಿದರು.
ಬೌಲರುಗಳ ಉತ್ತಮ ಪ್ರದರ್ಶನಕ್ಕೆ ಫೀಲ್ಡರುಗಳು ಕೂಡ ಪೂರಕ ಪ್ರದರ್ಶನ ನೀಡಿದರು. ಉತ್ತಮ ಫೀಲ್ಡಿಂಗ್ ಕೂಡ ಬೌಲರುಗಳಿಗೆ ನೆರವಾಯಿತು ಎಂದು ಧೋನಿ ಹೇಳಿದರು. ಸ್ರಾನ್ ಅವರು 10ಕ್ಕೆ 4 ವಿಕೆಟ್ ಕಬಳಿಸಿ ಪಂದ್ಯ ಪುರುಷ ಪ್ರಶಸ್ತಿಗೆ ಪಾತ್ರರಾಗಿದ್ದರು.
ಚೆಂಡು ಸ್ವಿಂಗ್ ಆಗುತ್ತಿತ್ತು. ನಾನು ಪೇಸ್ ಕಡೆ ಹೆಚ್ಚು ಗಮನ ಕೊಡದೇ ಸ್ವಿಂಗ್ ಕಡೆ ಗಮನಹರಿಸಿದೆ. ಏಕೆಂದರೆ ಪಿಚ್ ಆ ರೀತಿಯ ಬೌಲಿಂಗ್‌ಗೆ ಸೂಕ್ತವಾಗಿತ್ತು ಎಂದು ಹೇಳಿದರು.
ಕೇವಲ 99 ರನ್ ಗಳಿಸಿದ್ದು ಪಂದ್ಯದಿಂದ ನಮ್ಮನ್ನು ಸಂಪೂರ್ಣವಾಗಿ ಹೊರಗುಳಿಸಿತು ಎಂದು ಜಿಂಬಾಬ್ವೆ ನಾಯಕ ಗ್ರೇಮ್ ಕೇಮರ್ ಹೇಳಿದರು. ನಾವು ನಿಧಾನವಾಗಿ ಆಟ ಆರಂಭಿಸಿ ನಿರ್ಣಾಯಕ ಹಂತದಲ್ಲಿ ವಿಕೆಟ್ ಕಳೆದುಕೊಂಡೆವು. ಸರಣಿಯಲ್ಲಿ ಉತ್ತಮ ಆರಂಭದ ಬಳಿಕ ಇದು ನಿರಾಶಾದಾಯಕ ಎಂದರು. ಆದರೆ ಬುಧವಾರದ ಫೈನಲ್‌ಗೆ ನಾವು ಪುಳುಕಿತರಾಗಿದ್ದು, ನಾವು ಸರಣಿ ಗೆಲ್ಲುತ್ತೇವೆಂಬ ವಿಶ್ವಾಸವಿದೆ ಎಂದು ಕೇಮರ್ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ