ಹೈದರಾಬಾದ್: ಆರ್ ಸಿಬಿ, ಟೀಂ ಇಂಡಿಯಾ ಪರ ಆಡುವ ವೇಗಿ ಮೊಹಮ್ಮದ್ ಸಿರಾಜ್ ಹೈದರಾಬಾದ್ ನಲ್ಲಿ ಹೊಸ ಮನೆಗೆ ಇತ್ತೀಚೆಗಷ್ಟೇ ಗೃಹಪ್ರವೇಶ ಮಾಡಿಕೊಂಡಿದ್ದಾರೆ.
ಸಿರಾಜ್ ಗೃಹಪ್ರವೇಶಕ್ಕೆ ಆರ್ ಸಿಬಿ ಆಟಗಾರರು ತೆರಳಿದ್ದರು. ಆರ್ ಸಿಬಿ ನಾಯಕ ಫಾ ಡು ಪ್ಲೆಸಿಸ್, ಕೊಹ್ಲಿ ಸೇರಿದಂತೆ ಹೆಚ್ಚಿನ ಕ್ರಿಕೆಟಿಗರು ಸಿರಾಜ್ ಮನೆಯಲ್ಲಿರುವ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅದರ ನಡುವೆ ಸಿರಾಜ್ ಮನೆಯ ಲಿವಿಂಗ್ ರೂಂ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣ, ಸಿರಾಜ್ ತಮ್ಮ ಟ್ರೋಫಿಗಳನ್ನಿಡಲೆಂದೇ ಮಾಡಿರುವ ಶೋಕೇಸ್ ನಲ್ಲಿ ಕೊಹ್ಲಿಯ ಬ್ಯಾಟ್ ಇದೆ. ಇನ್ನು ಗೋಡೆ ಮೇಲೂ ಕೊಹ್ಲಿ ಜೊತೆಗಿರುವ ಫೋಟೋವನ್ನು ಫ‍್ರೇಮ್ ಮಾಡಿ ಹಾಕಿಕೊಂಡಿದ್ದಾರೆ. ಸಿರಾಜ್ ವೃತ್ತಿ ಬದುಕಿನಲ್ಲಿ ಕೊಹ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ. ಇದೇ ಕಾರಣಕ್ಕೆ ಅವರು ಕೊಹ್ಲಿಗೆ ತಮ್ಮ ಮನೆಯಲ್ಲಿ ವಿಶೇಷ ಸ್ಥಾನ ನೀಡಿದ್ದಾರೆ.