Select Your Language

Notifications

webdunia
webdunia
webdunia
webdunia

ದೇಶದ ಎಲ್ಲಾ ಕ್ರೀಡಾ ಒಕ್ಕೂಟಗಳ ಮೇಲೂ ಸುಪ್ರೀಂ ಕೋರ್ಟ್ ಚಾಟಿ ಬೀಸಲಿ

ಸುಪ್ರೀಂ ಕೋರ್ಟ್

ಕೃಷ್ಣವೇಣಿ ಕೆ

NewDelhi , ಸೋಮವಾರ, 2 ಜನವರಿ 2017 (18:04 IST)
ನವದೆಹಲಿ: ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐನಲ್ಲಿ ಬಿರುಗಾಳಿ ಎದ್ದಿದೆ. ಅದರ ನಿಯಂತ್ರಣ ಇದೀಗ ಸಂಪೂರ್ಣವಾಗಿ ಉಚ್ಛ ನ್ಯಾಯಾಲಯದ ಕೈಯಲ್ಲಿದೆ. ಇದುವರೆಗೆ ವಿಶ್ವ ಕ್ರಿಕೆಟ್ ನ ಸಾಮ್ರಾಟನಾಗಿ ಮೆರೆಯುತ್ತಿದ್ದ ಸಂಸ್ಥೆ ಇದೀಗ ಕುಸಿದು ಬಿದ್ದಿದೆ.


ಎಲ್ಲಾ ಲೋಧಾ ಸಮಿತಿ ವರದಿಯ ಇಫೆಕ್ಟ್.  ಯಾವಾಗ ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಲೋಧಾ ಸಮಿತಿ ಬಿಸಿಸಿಐನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನೆಲ್ಲಾ ಬಯಲಿಗೆಳೆದಿತ್ತೋ ಅಲ್ಲಿಂದ ಸಂಕಷ್ಟದ ಸರಮಾಲೆ ಶುರುವಾಗಿತ್ತು. ಅಷ್ಟಾದರೂ, ಸುಪ್ರೀಂ ಕೋರ್ಟ್ ತನಗೇನೂ ಮಾಡಲಾಗದು ಎಂಬ ಹುಂಬುತನದಲ್ಲೇ ಬಿಸಿಸಿಐನ ದೊಡ್ಡ ತಲೆಗಳು ಅಂದುಕೊಂಡಿದ್ದರು.

ಹಿಂದೊಮ್ಮೆ ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಯಾಗಿರುವ ಬಿಸಿಸಿಐ ನನ್ನು ದೇಶದ ಇತರ ಕ್ರೀಡಾ ಸಂಸ್ಥೆಗಳಂತೆ ತನ್ನ ಸುಪರ್ದಿಗೆ ತರುವ ಪ್ರಯತ್ನ ನಡೆಸಿತ್ತಾದರೂ, ರಾಜಕೀಯ ನಾಯಕರ ಶಕ್ತಿಯಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯೂ ಹಾಗೇ ಆಗಬಹುದು ಎಂದು ಲೆಕ್ಕಾಚಾರ ಹಾಕಿದ್ದ ಬಿಸಿಸಿಐ ದೊರೆಗಳಿಗೆ ಸುಪ್ರೀಂ ಕೋರ್ಟ್ ಸರಿಯಾಗಿ ಚಾಟಿ ಬೀಸಿದೆ.

ಆದರೆ ಇದರಿಂದಾಗಿ ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆ ಹಾಳಾಗಬಾರದು, ಅದು ಯಥಾ ಸ್ಥಿತಿಯಲ್ಲಿದ್ದರೆ ಸಾಕು ಎಂಬುದಷ್ಟೇ ಅಭಿಮಾನಿಗಳ ಪ್ರಾರ್ಥನೆ. ಟಿವಿ ಪ್ರಸಾರ, ಜಾಹೀರಾತುಗಳಿಂದ ಕೋಟಿ ಕೋಟಿ ಸಂಪಾದನೆ ಮಾಡಿರುವ ಬಿಸಿಸಿಐ ಯಾರಿಗೂ ಲೆಕ್ಕಾಚಾರ ಕೊಡಬೇಕಾಗಿರಲಿಲ್ಲ. ಹಿಂದೆಲ್ಲಾ ಅವ್ಯವಹಾರದ ಬಗ್ಗೆ ವಾಸನೆ ಬಂದರೂ, ದೊರೆಗಳು ಅಲ್ಲಿಯೇ ಅದನ್ನು ಹೊಸಕಿ ಹಾಕಿ ಬಿಡುತ್ತಿದ್ದರು.

ವಿಶೇಷವೆಂದರೆ 70 ವರ್ಷ ಮೇಲ್ಪಟ್ಟವರು ಬಿಸಿಸಿಐ ಉನ್ನತ ಹುದ್ದೆಗಳಲ್ಲಿ ಮುಂದುವರಿಯಬಾರದು ಎಂದು ನ್ಯಾಯಾಲಯ ಕಟ್ಟಪ್ಪಣೆ ಮಾಡಿದೆ. ಇದು ದೇಶದ ಕ್ರಿಕೆಟ್ ಹಿತಾಸಕ್ತಿಯಿಂದ ಸ್ವಾಗತಾರ್ಹ. ಯುವಕರೇ ಕ್ರೀಡಾ ಸಂಸ್ಥೆಗಳ ಚುಕ್ಕಾಣಿ ಹಿಡಿದರೆ, ಅವರಿಗೆ ಯವಕರ ಮನಸ್ಥಿತಿ ಚೆನ್ನಾಗಿ ಅರಿವಾಗುತ್ತದೆ.

ಇದು ಎಲ್ಲಾ ಕ್ರೀಡೆಗಳಿಗೂ ಅನ್ವಯಿಸಬೇಕು. ನಮ್ಮ ದೇಶದಲ್ಲಿ ಇತರೆ ಕ್ರೀಡಾ ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿರುವವರೆಲ್ಲಾ ವಯಸ್ಸಾದವರು, ರಾಜಕಾರಣಿಗಳು. ಇದರಿಂದಾಗಿ ಕ್ರೀಡೆ ಕುಂಠಿತಗೊಳ್ಳುತ್ತಿದೆ. ಕ್ರೀಡಾಳುಗಳ ನಿಜವಾದ ಅಗತ್ಯಗಳು ಪೂರೈಕೆಯಾಗುತ್ತಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ.

ನಮ್ಮಲ್ಲಿ ಉತ್ಸಾಹಿ ಯುವಕರು ಕ್ರೀಡೆಯನ್ನು ಮುನ್ನಡೆಸಬೇಕಿದೆ. ಬಿಸಿಸಿಐ ವಿರುದ್ಧ ಕೈಗೊಂಡ ಕ್ರಮವನ್ನು ಸುಪ್ರೀಂ ಕೋರ್ಟ್ ದೇಶದ ಇತರ ಕ್ರೀಡಾ ಸಂಸ್ಥೆಗಳ ಮೇಲೂ ಮಾಡಬೇಕಿದೆ. ರಾಜಕಾರಣದಲ್ಲಿ ವಂಶ ಪಾರಂಪರ್ಯವರಿವಂತೆ ನಮ್ಮ ಕೆಲವು ಕ್ರೀಡಾ ಸಂಸ್ಥೆಗಳಲ್ಲೂ ವಂಶ ಆಡಳಿತವಿದೆ. ಇದು ಕೊನೆಗೊಂಡು ಅರ್ಹರಿಗೆ ಅಧಿಕಾರ ನೀಡುವ ಕೆಲಸವಾಗಬೇಕಿದೆ. ಹಾಗಿದ್ದರೆ ಮಾತ್ರ, ನಮ್ಮಲ್ಲಿ ಕ್ರೀಡೆ, ಕ್ರೀಡಾಳುಗಳು ಉಳಿಯಲು ಸಾಧ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತ ನ್ಯಾಯಮೂರ್ತಿಗಳ ಆಧೀನದಲ್ಲಿ ಕ್ರಿಕೆಟ್ ಉತ್ತಂಗಕ್ಕೇರಲಿದೆ: ಸುಪ್ರೀಂಕೋರ್ಟ್‌ಗೆ ಠಾಕೂರ್ ಟಾಂಗ್