ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಜುಲೈ ತಿಂಗಳಿಂದ ಭುಗಿಲೆದ್ದಿರುವ ಸಂಘರ್ಷ ಮೂರನೆಯ ತಿಂಗಳಿಗೆ ಕಾಲಿಟ್ಟಿದೆ. ಇಲ್ಲಿಯವರೆಗೆ 76 ಪ್ರತಿಭಟನಾಕಾರರು ಸಾವನ್ನಪ್ಪಿದ್ದು ಕಣಿವೆ ನಾಡಿನುದ್ದಕ್ಕೂ ಭಾರತ ವಿರೋಧಿ ಭಾವನೆಗಳು ಬೆಳೆಯುತ್ತಲೇ ಸಾಗುತ್ತಿದೆ. ಮತ್ತೀಗ ಕಾಶ್ಮೀರದ ಕೆಲ ಮುಖ್ಯ ಆಟಗಾರರು ರಣಜಿ ಪಂದ್ಯಾವಳಿಯಲ್ಲಿ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅನೇಕ ಜನರು ಸಾವನ್ನಪ್ಪಿದ್ದಾರೆ. ಏನನ್ನು ಹೇಳಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ. ಪ್ರಸ್ತುತ ಪರಿಸ್ಥಿತಿ ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ ಎಂದು ಕಳೆದ ವರ್ಷದ ರಣಜಿ ಪಂದ್ಯಾವಳಿಯಲ್ಲಿ ತಂಡದ ಭಾಗವಾಗಿದ್ದ, ಹೆಸರು ಹೇಳ ಬಯಸದ ಕ್ರಿಕೆಟಿಗನೊಬ್ಬ ಹೇಳಿದ್ದಾನೆ.
ಸಾವಿನ ಮೈದಾನದಲ್ಲಿ ನಿಂತುಕೊಂಡು ನೀವು ಕ್ರಿಕೆಟ್ ಬಗ್ಗೆ ಯೋಚಿಸಲಾಗುವುದಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ, ನಾನು ಈ ಋತುವಿನ ರಣಜಿಯಿಂದ ಹೊರಗುಳಿಯುವ ಬಗ್ಗೆ ಚಿಂತಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ರಾಜ್ಯದ ಕ್ರೀಡಾ ಸಚಿವ ಮತ್ತು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಅಧ್ಯಕ್ಷ ರಾಜಾ ಅನ್ಸಾರಿ, ರಾಜ್ಯದ ಯಾವ ಆಟಗಾರರಿಂದ ಈ ರೀತಿಯ ನಕಾರಾತ್ಮಕ ಪ್ರತಿಕ್ರಿಯೆಯನ್ನು ಕೇಳ ಪಟ್ಟಿಲ್ಲ. ನಾನು ಪ್ರತಿಯೊಬ್ಬ ಆಟಗಾರರ ಜತೆ ಸಂಪರ್ಕದಲ್ಲಿದ್ದೇನೆ ಮತ್ತು ಯಾರು ಕೂಡ ಋಣಾತ್ಮಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ. ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಲಿದ್ದೇವೆ ಎಂಬ ವಿಶ್ವಾಸ ನಮಗಿದೆ. ನಾವು ಈ ಕುರಿತು ಆತಂಕಿತರಾಗಿಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ