ಓಲ್ಡ್ ಟ್ರಾಫರ್ಡ್: ಬರೋಬ್ಬರಿ 8 ವರ್ಷಗಳ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಕರುಣ್ ನಾಯರ್ ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಇದೀಗ ಅವರು ಪ್ಲೇಯಿಂಗ್ ಇಲೆವೆನ್ ನಿಂದಲೇ ಹೊರಬಿದ್ದಿದ್ದಾರೆ. ಇಲ್ಲಿಗೇ ಅವರ ವೃತ್ತಿ ಜೀವನ ಕತೆ ಮುಗಿಯಿತಾ?
33 ವರ್ಷದ ಕರುಣ್ ನಾಯರ್ ಈ ಹಿಂದೆ ಮೊದಲ ಬಾರಿಗೆ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಅವಕಾಶ ಸಿಕ್ಕಾಗ ತ್ರಿಶತಕ ಸಿಡಿಸಿ ಮಿಂಚಿದ್ದರು. ಆದರೆ ನಂತರ ಅವರು ಫಾರ್ಮ್ ಕಳೆದುಕೊಂಡರು. ಹಾಗಂತ ಅವರಿಗೆ ಹೆಚ್ಚು ಅವಕಾಶವೂ ಕೊಡಲಿಲ್ಲ ಎನ್ನಬಹುದು. ಅದಾದ ಬಳಿಕ ಅವರು ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದರೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗಲಿಲ್ಲ.
ಆದರೆ ಇತ್ತೀಚೆಗೆ ದೇಶೀಯ ಕ್ರಿಕೆಟ್ ಜೊತೆಗೆ ಐಪಿಎಲ್ ನಲ್ಲೂ ಮಿಂಚಿದ ಬಳಿಕ ಮತ್ತೆ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಅವಕಾಶ ಸಿಕ್ಕಿತು. ಆದರೆ ಅದನ್ನು ಅವರು ಬಳಸಿಕೊಳ್ಳಲು ವಿಫಲರಾದರು. ಮೊದಲ ಮೂರು ಟಸ್ಟ್ ಪಂದ್ಯಗಳಲ್ಲಿ ಅವಕಾಶ ಸಿಕ್ಕಿಯೂ ಅವರು ಅರ್ಧಶತಕ ಕೂಡಾ ಗಳಿಸಲು ವಿಫಲರಾದರು. ಮೂರು ಪಂದ್ಯಗಳಿಂದ ಅವರು ಗಳಿಸಿದ್ದು ಬರೀ 131 ರನ್. ಬಹುಶಃ ಒಂದೇ ಒಂದು ಪಂದ್ಯದಲ್ಲಿ ತಂಡಕ್ಕೆ ಆಪತ್ ಬಾಂಧವನಾಗಿ ಆಡಿದ್ದರೆ ಅವರಿಗೆ ಇನ್ನೊಂದು ಅವಕಾಶ ಸಿಗುತ್ತಿತ್ತು. ಆದರೆ ಅವರಿಂದ ಅಂತಹ ಇನಿಂಗ್ಸ್ ಬಂದೇ ಇಲ್ಲ.
ಈಗಾಗಲೇ ಕರುಣ್ ವಯಸ್ಸು 33 ದಾಟಿದೆ. ಭಾರತ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಯುವ ಬ್ಯಾಟಿಗರು ಸಾಕಷ್ಟು ಜನ ಇದ್ದಾರೆ. ನಾಲ್ಕನೇ ಪಂದ್ಯಕ್ಕೆ ಸಾಯಿ ಸುದರ್ಶನ್ ಆಯ್ಕೆಯಾಗಿದ್ದು ಒಂದು ವೇಳೆ ಅವರು ಕ್ಲಿಕ್ ಆದರೆ ಮುಂದೆ ಕರುಣ್ ನಾಯರ್ ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು.