Publish Date: Fri, 23 Jan 2026 (10:03 IST)
Updated Date: Fri, 23 Jan 2026 (10:06 IST)
ಬೆಂಗಳೂರು: ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವ ಬಗ್ಗೆ ಫ್ರಾಂಚೈಸಿ ಇನ್ನೂ ಸ್ಪಷ್ಟ ನಿರ್ಧಾರ ಹೇಳಿಲ್ಲ. ಅಷ್ಟಕ್ಕೂ ಆರ್ ಸಿಬಿ ತವರಿನಲ್ಲಿ ಆಡಲು ಹಿಂದೇಟು ಹಾಕುತ್ತಿರುವುದು ಯಾಕೆ ಗೊತ್ತಾ?
ಕಳೆದ ಸೀಸನ್ ನ ಚಾಂಪಿಯನ್ ಆದ ಬಳಿಕ ಚಿನ್ನಸ್ವಾಮಿ ಮೈದಾನಕ್ಕೆ ಬಂದಾಗ ಏನೆಲ್ಲಾ ಆಯ್ತು ಎನ್ನುವುದನ್ನು ಬಹುಶಃ ಅಭಿಮಾನಿಗಳು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತಕ್ಕೆ ಫ್ರಾಂಚೈಸಿಯನ್ನೇ ಹೊಣೆ ಮಾಡಲಾಗಿತ್ತು.
ಇದರ ನಂತರ ಆರ್ ಸಿಬಿ ಈಗ ತವರಿನಲ್ಲಿ ಪಂದ್ಯ ಆಯೋಜಿಸಲು ಹಿಂದೆ ಮುಂದೆ ನೋಡುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆ ಸೂಚಿಸಿದಂತೆ ಅನೇಕ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಆದರೆ ಪ್ರೇಕ್ಷಕರ ಸುರಕ್ಷತೆಗೆ ಇನ್ನಷ್ಟು ಕ್ರಮ ಕೈಗೊಳ್ಳಬೇಕಿದೆ ಎಂದು ಆರ್ ಸಿಬಿ ಹೇಳಿದೆ. ಅಭಿಮಾನಿಗಳೇ ನಮ್ಮ ಜೀವಾಳ. ಅವರ ಸುರಕ್ಷತೆಯೇ ನಮಗೆ ಮೊದಲು ಎಂದಿದೆ. ಹೀಗಾಗಿ ಸುರಕ್ಷತೆ ಬಗ್ಗೆ ತೃಪ್ತಿಯಾಗದ ಹೊರತು ಆರ್ ಸಿಬಿ ಚಿನ್ನಸ್ವಾಮಿಯಲ್ಲೇ ಪಂದ್ಯ ಆಯೋಜಿಸಲು ಮುಂದಾಗುವುದು ಅನುಮಾನವಾಗಿದೆ.