ವಿಶಾಖಪಟ್ಟಣಂ: ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಬೇಕಾಗಿದ್ದ ಪಂದ್ಯವನ್ನು ಕೇವಲ 1 ವಿಕೆಟ್ ಗಳಿಂದ ಸೋತ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಮಾಲಿಕ ಸಂಜೀವ್ ಗೊಯೆಂಕಾ ಸಿಟ್ಟಾಗಿದ್ದು, ನಾಯಕ ರಿಷಭ್ ಪಂತ್ ಜೊತೆ ಮಾತುಕತೆ ನಡೆಸುತ್ತಿರುವ ಫೋಟೋಗಳು ವೈರಲ್ ಆಗಿವೆ.
ಈ ಹಿಂದೆ ಕೆಎಲ್ ರಾಹುಲ್ ಲಕ್ನೋ ತಂಡದ ನಾಯಕರಾಗಿದ್ದಲೂ ಸಂಜೀವ್ ಗೊಯೆಂಕಾ ಮೈದಾನದಲ್ಲೇ ನಾಯಕನ ಜೊತೆ ವಾಗ್ವಾದ ನಡೆಸಿ ವಿವಾದಕ್ಕೀಡಾಗಿದ್ದರು. ಹಲವರು ರಾಹುಲ್ ಇಷ್ಟು ಅವಮಾನ ಮಾಡಿಸಿಕೊಂಡು ತಂಡದಲ್ಲಿರಬಾರದು ಎಂದಿದ್ದರು.
ಇದೀಗ ರಿಷಭ್ ಪಂತ್ ಸರದಿ. ಮೊದಲ ಪಂದ್ಯದಲ್ಲಿ ರಿಷಭ್ ಬ್ಯಾಟಿಂಗ್ ನಲ್ಲಿ ಶೂನ್ಯ ಸುತ್ತಿದ್ದಲ್ಲದೆ, ಕೀಪಿಂಗ್ ನಲ್ಲೂ ಒಂದು ಸ್ಟಂಪ್ ಚಾನ್ಸ್ ಮಿಸ್ ಮಾಡಿಕೊಂಡಿದ್ದರು. ನಾಯಕತ್ವವೂ ಹೇಳಿಕೊಳ್ಳುವಂತಿರಲಿಲ್ಲ. ಈ ಸೀಸನ್ ನಲ್ಲಿ ರಾಹುಲ್ ರನ್ನು ಕಿತ್ತು ಹಾಕಿ ಸಂಜೀವ್ 27 ಕೋಟಿ ರೂ. ಕೊಟ್ಟು ರಿಷಭ್ ರನ್ನು ಖರೀದಿಸಿದ್ದರು.
ಆದರೆ ರಿಷಭ್ ನಾಯಕತ್ವದಲ್ಲಿ ಮೊದಲ ಪಂದ್ಯವನ್ನೇ ಸೋತಾಗ ಸಂಜೀವ್ ಗೊಯೆಂಕಾ ಸಿಟ್ಟು ನೆತ್ತಿಗೇರಿತ್ತು. ಪಂದ್ಯ ಮುಗಿದ ಬಳಿಕ ಈ ಹಿಂದೆ ರಾಹುಲ್ ಗೆ ಮಾಡಿದಂತೆ ರಿಷಭ್ ಗೂ ಮೈದಾನದಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನು ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. 27 ಕೋಟಿ ಕೊಟ್ಟು ಖರೀದಿ ಮಾಡಿದ್ದು ವೇಸ್ಟ್ ಅಭ್ಯರ್ಥಿ ಎಂದು ಸಂಜೀವ್ ಗೊಯೆಂಕಾಗೆ ಈಗ ಮನವರಿಕೆ ಆಗಿರಬಹುದು ಎಂದು ಕೆಲವರು ಕಾಲೆಳೆದರೆ ರಿಷಭ್ ಗೆ ಮ್ಯಾಚ್ ಸೋತಿದ್ದಕ್ಕಿಂತಲೂ ಮಾಲಿಕರ ಬೈಗುಳದ್ದೇ ತಲೆಬಿಸಿಯಿರಬಹುದು ಎಂದು ತಮಾಷೆ ಮಾಡಿದ್ದಾರೆ.