Publish Date: Wed, 04 Jun 2025 (09:50 IST)
Updated Date: Wed, 04 Jun 2025 (10:05 IST)
ಬೆಂಗಳೂರು: ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿ ಚಾಂಪಿಯನ್ ಆಗಿರುವ ಆರ್ ಸಿಬಿ ಆಟಗಾರರು ಕಪ್ ಸಮೇತ ಇಂದು ಬೆಂಗಳೂರಿನಲ್ಲಿ ಮೆರವಣಿಗೆ ಮಾಡಿ ಅಭಿಮಾನಿಗಳ ಜೊತೆಗೆ ಸೆಲೆಬ್ರೇಷನ್ ಮಾಡಲಿದ್ದಾರೆ. ಎಲ್ಲೆಲ್ಲಿ ಮೆರವಣಿಗೆಯಾಗುತ್ತದೆ ಇಲ್ಲಿದೆ ವಿವರ.
ನಿನ್ನೆ ಆರ್ ಸಿಬಿ ಗೆಲ್ಲುತ್ತಿದ್ದಂತೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಭಿಮಾನಿಗಳು ಮಧ್ಯರಾತ್ರಿ ರಸ್ತೆಗಿಳಿದು ಸಂಭ್ರಮಿಸಿದ್ದರು. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಇರುತ್ತಿದ್ದ ಸಂಭ್ರಮ ನಿನ್ನೆ ಇತ್ತು.
ಆಟಗಾರರು ಮಾತ್ರವಲ್ಲ, ಅಭಿಮಾನಿಗಳು ಕಳೆದ 17 ವರ್ಷಗಳಿಂದ ಈ ಕಪ್ ಗಾಗಿ ಕಾದಿದ್ದರು. ಅದೀಗ ನೆರವೇರಿದೆ. ಹೀಗಾಗಿ ಆರ್ ಸಿಬಿ ಫ್ರಾಂಚೈಸಿ ಅಭಿಮಾನಿಗಳ ಸಮ್ಮುಖದಲ್ಲೇ ಸಂಭ್ರಮಾಚರಿಸಲು ಮುಂದಾಗಿದೆ.
ಹೀಗಾಗಿ ಇಂದು ಸಂಜೆ ಬೆಂಗಳೂರಿನಲ್ಲಿ ವಿಧಾನಸೌಧ ರಸ್ತೆ ಮುಂಭಾಗದಿಂದ ಚಿನ್ನಸ್ವಾಮಿ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ ಎನ್ನಲಾಗಿದೆ. ಈ ವೇಳೆ ತಂಡದ ಆಟಗಾರರೆಲ್ಲರೂ ಭಾಗಿಯಾಗಲಿದ್ದಾರೆ. ಇನ್ನು, ಅಭಿಮಾನಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ಹೀಗಾಗಿ ಇಂದು ಸಂಜೆ ಈ ರಸ್ತೆಗಳು ಸಂಪೂರ್ಣ ಕೆಂಪು ಜೆರ್ಸಿಮಯವಾಗಲಿದೆ.