Publish Date: Mon, 18 Mar 2024 (20:29 IST)
Updated Date: Mon, 18 Mar 2024 (20:33 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಭಾಗಿಯಾಗಲು ವಿರಾಟ್ ಕೊಹ್ಲಿ ಆರ್ ಸಿಬಿ ಪಾಳಯ ಸೇರಿಕೊಂಡಿದ್ದಾರೆ. ಕೊಹ್ಲಿ ಆರ್ ಸಿಬಿ ಸೇರಿಕೊಂಡಿರುವುದನ್ನು ಫ್ರಾಂಚೈಸಿಯೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಕೊಹ್ಲಿ ಕೂಡಾ ಇತರೆ ಆಟಗಾರರೊಂದಿಗೆ ಭಾಗಿಯಾಗಲಿದ್ದಾರೆ. ಇದಕ್ಕಾಗಿ ನಿನ್ನೆಯೇ ಕೊಹ್ಲಿ ಬೆಂಗಳೂರು ವಿಮಾನವೇರಿದ್ದರು. ಕೊಹ್ಲಿ ಆಗಮಿಸಿರುವುದು ಆರ್ ಸಿಬಿ ಫ್ಯಾನ್ಸ್ ಗೆ ಮತ್ತಷ್ಟು ಖುಷಿ ತಂದಿದೆ.
ಪುತ್ರ ಅಕಾಯ್ ಜನನದ ಬಳಿಕ ಕೊಹ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಇಲ್ಲ. ಕ್ರಿಕೆಟ್ ಪಂದ್ಯಗಳಲ್ಲೂ ಭಾಗಿಯಾಗದೇ ತುಂಬಾ ಸಮಯವೇ ಆಗಿತ್ತು. ಈಗ ಕಿಂಗ್ ಕೊಹ್ಲಿಯನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡುವ ತವಕ ಅಭಿಮಾನಿಗಳಲ್ಲಿದೆ. ಅದರಲ್ಲೂ ಮುಂಬರುವ ಟಿ20 ವಿಶ್ವಕಪ್ ಗೆ ತಮ್ಮನ್ನು ಹೊರಗಿಡುವ ಮಾತನಾಡುತ್ತಿರುವವರಿಗೆ ಕೊಹ್ಲಿ ಈ ಐಪಿಎಲ್ ನಲ್ಲಿ ತಕ್ಕ ತಿರುಗೇಟು ನೀಡುವ ನಿರೀಕ್ಷೆಯಿದೆ.
ನಿನ್ನೆಯಷ್ಟೇ ಆರ್ ಸಿಬಿ ಮಹಿಳಾ ತಂಡ ಡಬ್ಲ್ಯುಪಿಎಲ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಆರ್ ಸಿಬಿ ಮಹಿಳೆಯರು ಫೈನಲ್ ಗೆದ್ದ ಸಂದರ್ಭದಲ್ಲಿ ಕೊಹ್ಲಿ ಸ್ವತಃ ವಿಡಿಯೋ ಕಾಲ್ ಮಾಡಿ ಮೈದಾನದಲ್ಲಿಯೇ ಸ್ಮೃತಿ ಮಂಧಾನ ಪಡೆಗೆ ಅಭಿನಂದನೆ ಸಲ್ಲಿಸಿದ್ದರು.