ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ವಿವಾದಾತ್ಮಕ ತೀರ್ಪಿಗೆ ಬಲಿಯಾದ ಆರ್ ಸಿಬಿ ಬ್ಯಾಟಿಗ ವಿರಾಟ್ ಕೊಹ್ಲಿ ಅಂಪಾಯರ್ ಜೊತೆ ವಾಗ್ವಾದ ನಡೆಸಿದ್ದರು.
ವಿರಾಟ್ ಕೊಹ್ಲಿ ಔಟಾದ ಬಾಲ್ ನೋ ಬಾಲ್ ಆಗಿತ್ತು ಎನ್ನುವುದು ಎಲ್ಲರ ವಾದ. ಆದರೆ ಅಂಪಾಯರ್ ಔಟ್ ತೀರ್ಪು ನೀಡಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಅಂಪಾಯರ್ ಜೊತೆ ಕೊಹ್ಲಿ, ಕ್ರೀಸ್ ನಲ್ಲಿದ್ದ ಫಾ ಡು ಪ್ಲೆಸಿಸ್ ಕೂಡಾ ವಾಗ್ವಾದ ನಡೆಸಿದ್ದರು. ಕೊಹ್ಲಿಯಂತೂ ಸಿಟ್ಟಿನಿಂದ ಜೋರಾಗಿ ಮಾತುಕತೆ ನಡೆಸಿದ್ದರು.
ಇದು ಇಷ್ಟಕ್ಕೇ ನಿಲ್ಲಲಿಲ್ಲ. ಪಂದ್ಯ ಮುಗಿದ ಬಳಿಕವೂ ಕೊಹ್ಲಿ ಅಂಪಾಯರ್ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ಪಂದ್ಯವನ್ನು 1 ರನ್ ನಿಂದ ಸೋತ ಆರ್ ಸಿಬಿ ಪ್ಲೇ ಆಫ್ ನಿಂದ ಹೊರಬಿತ್ತು. ಪಂದ್ಯದ ಬಳಿಕ ಮೈದಾನದ ಬದಿಯಲ್ಲಿ ನಿಂತಿದ್ದ ಅಂಪಾಯರ್ ಗಳ ಬಳಿ ಬಂದ ಕೊಹ್ಲಿ ಮತ್ತೆ ನೋ ಬಾಲ್ ಕುರಿತು ಚರ್ಚೆ ಮಾಡಿದ್ದಾರೆ. ಅಂಪಾಯರ್ ಗಳಿಗೆ ಬಾಲ್ ತಮ್ಮ ಸೊಂಟದ ಮೇಲಿತ್ತು ಎನ್ನುವುದನ್ನು ಮತ್ತೆ ಅಂತಹದ್ದೇ ಶಾಟ್ ಹೊಡೆಯುವಂತೆ ಮಾಡಿ ತೋರಿಸಿದ್ದಾರೆ.
ಸ್ವತಃ ಅಂಪಾಯರ್ ಕರೆದು ವಿರಾಟ್ ಕೊಹ್ಲಿಗೆ ತಿಳಿಹೇಳಲು ಪ್ರಯತ್ನಿಸಿದ್ದಾರೆ. ಇದಕ್ಕೆ ಕೊಹ್ಲಿ ಕೂಡಾ ವಿವರಣೆ ನೀಡಿದ್ದಾರೆ. ಈ ವೇಳೆ ಮೈದಾನದ ಸಿಬ್ಬಂದಿ ಜೊತೆಗೆ ಕೆಕೆಆರ್ ಆಟಗಾರ ರಿಂಕು ಸಿಂಗ್ ಕೂಡಾ ಸೇರಿದ್ದಾರೆ.