Publish Date: Sun, 21 Apr 2024 (12:11 IST)
Updated Date: Sun, 21 Apr 2024 (12:15 IST)
ಚೆನ್ನೈ: ಐಪಿಎಲ್ 2024 ರಲ್ಲಿ ನಾಯಕತ್ವ ತ್ಯಜಿಸಿದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟಿಗನಾಗಿ ಧೋನಿ ಆಟ ಮುಂದುವರಿಸಿದ್ದಾರೆ. ಆದರೆ ಅವರಿಗೆ ಇನ್ನು ಐಪಿಎಲ್ ಆಡಲು ಸಾಧ‍್ಯವಾಗದು ಎಂದು ಹೇಳಲಾಗುತ್ತಿದೆ.
ಧೋನಿ ಈ ಐಪಿಎಲ್ ನಲ್ಲೇ ಬ್ಯಾಟಿಂಗ್, ಕೀಪಿಂಗ್ ಮಾಡುತ್ತಿದ್ದರೂ ಅದು ಅಭಿಮಾನಿಗಳಿಗಾಗಿ ಮಾತ್ರ. ಧೋನಿ ಆಡುವುದನ್ನು ನೋಡಬೇಕು, ಧೋನಿ ಬ್ಯಾಟಿಂಗ್ ಮಾಡಲೇಬೇಕು ಎಂದು ಪಟ್ಟು ಹಿಡಿಯುವ ಅಭಿಮಾನಿಗಳಿಗಾಗಿಯೇ ಧೋನಿ ಈ ಐಪಿಎಲ್ ಆಡುತ್ತಿದ್ದಾರೆ ಎಂದರೆ ತಪ್ಪಾಗದು.
ಯಾಕೆಂದರೆ ಅವರ ಮಂಡಿ ನೋವು ಈಗ ಅವರಿಗೆ ಬಹುವಾಗಿ ಕಾಡುತ್ತಿದೆ. ಪ್ರತೀ ಬಾರಿ ಐಸ್ ಪ್ಯಾಕ್ ಕಟ್ಟಿಕೊಂಡು ಮೈದಾನಕ್ಕಿಳಿಯುತ್ತಿದ್ದಾರೆ. ಹಾಗಿದ್ದರೂ ಫೈನಲ್ ಓವರ್ ಗಳಲ್ಲಿ ಬರುವ ಧೋನಿ ಭರ್ಜರಿ ಸಿಕ್ಸರ್ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆ.
ಅವರ ಬ್ಯಾಟಿಂಗ್ ನೋಡಿ ಅಭಿಮಾನಿಗಳು ಧೋನಿಗೆ ಅಗ್ರ ಕ್ರಮಾಂಕದಲ್ಲಿ ಅವಕಾಶ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಇದು ಸಾಧ‍್ಯವಾಗದು. ಇದಕ್ಕೆ ಕಾರಣವೇನೆಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ವಿವರಿಸಿದ್ದಾರೆ. ಧೋನಿಗೆ ನೀವು, ನಾವು ಬಯಸಿದರೂ ಈಗ ಗಾಯದಿಂದಾಗಿ ಹೆಚ್ಚು ಹೊತ್ತು ಕ್ರೀಸ್ ನಲ್ಲಿದ್ದು ಬಾಲ್ ಫೇಸ್ ಮಾಡುವ ಫಿಟ್ನೆಸ್ ಇಲ್ಲ. ಹೀಗಾಗಿ ಅವರು ಅಭಿಮಾನಿಗಳಿಗೆ ನಿರಾಸೆಯಾಗಬಾರದು ಎಂದು ಕೆಳ ಕ್ರಮಾಂಕದಲ್ಲಿ ಆಡಲು ಬರುತ್ತಿದ್ದಾರೆ ಎಂದು ಫ್ಲೆಮಿಂಗ್ ಹೇಳಿದ್ದಾರೆ.