ಬೆಂಗಳೂರು: ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯ ಗೆದ್ದ ಬಳಿಕ ಆರ್ ಸಿಬಿ ಆಟಗಾರರು ಎಷ್ಟು ಮೈಮರೆತಿದ್ದರೆಂದರೆ ಬೆಳಗಿನ ಜಾವದವರೆಗೂ ಪಾರ್ಟಿ ಮಾಡುತ್ತಿದ್ದರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಪ್ಲೇ ಆಫ್ ಗೆ ಅರ್ಹತೆ ಪಡೆಯುತ್ತಿದ್ದಂತೇ ಆರ್ ಸಿಬಿ ಆಟಗಾರರು ಫೈನಲ್ ಗೆದ್ದಂತೆ ಕುಣಿದಾಡಿದ್ದರು. ಅವರ ಈ ಮಟ್ಟಿಗಿನ ಸಂಭ್ರಮಾಚರಣೆ ಟೀಕೆಗೆ ಗುರಿಯಾಗಿತ್ತು. ಆದರೆ ಆರ್ ಸಿಬಿ ಆಟಗಾರರ ಸಂಭ್ರಮಾಚರಣೆ ಕೇವಲ ಮೈದಾನದಲ್ಲಿ ಮಾತ್ರವಲ್ಲ, ಹೊರಗೆಯೂ ಮುಂದುವರಿದಿತ್ತು ಎನ್ನಲಾಗಿದೆ.
ಆರ್ ಸಿಬಿ ಬೌಲರ್ ಯಶ್ ದಯಾಳ್ ತಂದೆ ಈ ವಿಚಾರವನ್ನು ಹೊರಹಾಕಿದ್ದಾರೆ. ಚೆನ್ನೈ ಸೋಲಿಸಿದ ಬಳಿಕ ಆರ್ ಸಿಬಿ ಆಟಗಾರರು ಭಾರೀ ಸಂತೋಷದಲ್ಲಿದ್ದರು. ಬೆಳಗಿನ ಜಾವ 5 ಗಂಟೆಯವರೆಗೂ ಪಾರ್ಟಿ ಮಾಡಿ ಸಂತೋಷಪಟ್ಟರು ಎಂದು ಹೇಳಿದ್ದಾರೆ.
ಆದರೆ ಅವರ ಈ ಹೇಳಿಕೆಯೇ ಈಗ ಆರ್ ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆ ರೀತಿ ಮೈಮರೆತಿದ್ದಕ್ಕೇ ಮುಂದಿನ ಪಂದ್ಯದಲ್ಲಿ ಸೋತು ಕೂಟದಿಂದ ನಿರ್ಗಮಿಸುವ ಪರಿಸ್ಥಿತಿ ಬಂದಿದೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಇದಾದ ಬಳಿಕ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಹಮ್ಮದಾಬಾದ್ ನಲ್ಲಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಆರ್ ಸಿಬಿ ಸೋಲು ಅನುಭವಿಸಿತು.