Publish Date: Fri, 15 Mar 2024 (13:10 IST)
Updated Date: Fri, 15 Mar 2024 (13:19 IST)
ಬೆಂಗಳೂರು: ಐಪಿಎಲ್ 2024 ಆರಂಭಕ್ಕೆ ಮುನ್ನ ಪ್ರತಿವರ್ಷದಂತೆ ನಡೆಯುವ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಲೈವ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಐಪಿಎಲ್ ಆರಂಭಕ್ಕೆ ಮುನ್ನ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳಿಗಾಗಿ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಮೈದಾನಕ್ಕೆ ಪ್ರವೇಶ ಅನುಮತಿಯಿದೆ. ಸಾವಿರಾರು ಸಂಖ್ಯೆಯಲ್ಲಿ ಮೈದಾನಕ್ಕೆ ಅಭಿಮಾನಿಗಳು ಬರುತ್ತಾರೆ. ಈಗಾಗಲೇ ಇದರ ಟಿಕೆಟ್ ಸೇಲ್ ಕೂಡಾ ಆರಂಭವಾಗಿದೆ.
ಈ ಸಂದರ್ಭದಲ್ಲಿ ಆಟಗಾರರು ಮೈದಾನಕ್ಕೆ ಬಂದು ಅಭಿಮಾನಿಗಳ ಅಭಿನಂದನೆ ಸ್ವೀಕರಿಸುತ್ತಾರೆ. ಕಳೆದ ವರ್ಷ ವಿರಾಟ್ ಕೊಹ್ಲಿ, ಫಾ ಡು ಪ್ಲೆಸಿಸ್ ರಂತಹ ಆಟಗಾರರು ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿ, ಫೋಟೋಗೆ ಪೋಸ್ ಕೊಟ್ಟು ಖುಷಿಕೊಟ್ಟಿದ್ದರು. ಇದು ಇಷ್ಟಕ್ಕೇ ನಿಲ್ಲಲ್ಲ.
ಅಭಿಮಾನಿಗಳನ್ನು ರಂಜಿಸಲು ಖ್ಯಾತ ಗಾಯಕರಿಂದ ಲೈವ್ ಕಾರ್ಯಕ್ರಮ, ಡ್ಯಾನ್ಸ್ ಕೂಡಾ ಇರುತ್ತದೆ. ಕಳೆದ ವರ್ಷ ಸೋನು ನಿಗಂ ಹಾಡಿ ರಂಜಿಸಿದ್ದರು. ಈ ಬಾರಿ ಕಾರ್ಯಕ್ರಮ ನಡೆಸಿಕೊಡಲು ಆಹ್ವಾನಿತರಾಗಿರುವ ಗಾಯಕರಲ್ಲಿ ಕನ್ನಡದವರೇ ಆದ ರಘು ದೀಕ್ಷಿತ್ ಕೂಡಾ ಒಬ್ಬರು.
ಜಾನಪದ ಹಾಡುಗಳಿಗೆ ರಾಕ್ ಟಚ್ ಕೊಟ್ಟು ಕನ್ನಡ ಹಾಡಿಗೂ ಜನ ಹುಚ್ಚೆದ್ದು ಕುಣಿಯುವಂತೆ ಮಾಡಿದ ರಘು ದೀಕ್ಷಿತ್ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಆಟಗಾರರು ಮತ್ತು ಅಭಿಮಾನಿಗಳ ಮುಂದೆ ಹಾಡಿ ರಂಜಿಸಲಿದ್ದಾರೆ. ಅವರ ಜೊತೆಗೆ ಅಲನ್ ವಾಲ್ಕರ್, ನೀತಿ ಮೋಹನ್ ಕೂಡಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಎದಿರು ನೋಡುತ್ತಿದ್ದಾರೆ.