Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಲಕ್ನೋ ಸೂಪರ್ ಜೈಂಟ್ಸ್ ಮನೆಗೆ

LSG

Krishnaveni K

ದೆಹಲಿ , ಬುಧವಾರ, 15 ಮೇ 2024 (08:19 IST)
ದೆಹಲಿ: ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 19 ರನ್ ಗಳಿಂದ ಸೋತ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇ ಆಫ್ ಗಿಂತ ಮೊದಲೇ ನಿರ್ಗಮಿಸಿದೆ. ಇತ್ತ ಡೆಲ್ಲಿ ಸ್ಥಿತಿಯೂ ಹೆಚ್ಚು ಕಡಿಮೆ ಇದೇ ಆಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಡೆಲ್ಲಿ ಪರ ಅಬ್ಬರಿಸಿದ ಅಭಿಷೇಕ್ ಪೊರೆಲ್ 58, ಶೈ ಹೋಪ್ಸ್ 38, ರಿಷಬ್ ಪಂತ್ 33 ರನ್ ಗಳಿಸಿದರು. ಆದರೆ ಡೆಲ್ಲಿ ತಂಡ 200 ಪ್ಲಸ್ ರನ್ ಗಳಿಸಲು ನೆರವಾಗಿದ್ದು ತ್ರಿಸ್ಟಾನ್ ಸ್ಟಬ್ಸ್ ಸಿಡಿಲಬ್ಬರದ ಬ್ಯಾಟಿಂಗ್. 25 ಎಸೆತ ಎದುರಿಸಿದ ಅವರು 4 ಸಿಕ್ಸರ್ ಗಳೊಂದಿಗೆ ಅಜೇಯ 57 ರನ್ ಗಳಿಸಿದರು. ಲಕ್ನೋ ಪರ ನವೀನ್ ಉಲ್ ಹಕ್ 2 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಲಕ್ನೋಗೆ ಆರಂಭಿಕರು ಕೈಕೊಟ್ಟರು. ಕ್ವಿಂಟನ್ ಡಿ ಕಾಕ್ 12, ಕೆಎಲ್ ರಾಹುಲ್ 5 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಬಂದ ಸ್ಟಾಯ್ನಿಸ್ 5, ದೀಪಕ್ ಹೂಡಾ ಶೂನ್ಯಕ್ಕೆ ನಿರ್ಗಮಿಸಿದರು. ಒಂದು ಹಂತದಲ್ಲಿ 44 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿದ್ದು ನಿಕಲಸ್ ಪೂರನ್ ಮತ್ತು ಅರ್ಶದ್ ಖಾನ್. ಪೂರನ್ 27 ಎಸೆತಗಳಿಂದ 61 ರನ್ ಚಚ್ಚಿದರೆ, ಅರ್ಶದ್ ಖಾನ್ 33 ಎಸೆತಗಳಿಂದ ಅಜೇಯ 58 ರನ್ ಗಳಿಸಿದರು. ಅಂತಿಮವಾಗಿ ಲಕ್ನೋ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಪರ ಮಿಂಚಿದ ಹಿರಿಯ ವೇಗಿ ಇಶಾಂತ್ ಶರ್ಮಾ 3 ವಿಕೆಟ್ ಕಬಳಿಸಿದರು.

ಇದರೊಂದಿಗೆ ಲಕ್ನೋ ಖಚಿತವಾಗಿ ಲೀಗ್ ಹಂತದಲ್ಲೇ ಕೂಟದಿಂದ ನಿರ್ಗಮಿಸಿತು. ಇತ್ತ ಡೆಲ್ಲಿ ಉತ್ತಮ ರನ್ ರೇಟ್ ಪಡೆಯದ ಕಾರಣ ಪ್ಲೇ ಆಫ್ ಗೇರುವುದು ಅನುಮಾನವಾಗಿದೆ. ಯಾವುದಕ್ಕೂ ಶನಿವಾರ ನಡೆಯಲಿರುವ ಆರ್ ಸಿಬಿ-ಸಿಎಸ್ ಕೆ ಪಂದ್ಯದ ಮೇಲೆ ಎಲ್ಲವೂ ಅವಲಂಬಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಾಂಡ್ಯ ಬರುತ್ತಿದ್ದಂತೇ ಎದ್ದು ಹೋದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್