Publish Date: Mon, 01 Jan 2024 (11:30 IST)
Updated Date: Mon, 01 Jan 2024 (11:31 IST)
ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಕಾರಣಕ್ಕೆ ಆಟಗಾರರು ಕಠಿಣ ತರಬೇತಿ ನಡೆಸುತ್ತಿದ್ದಾರೆ.
ಮೊನ್ನೆಯಿಂದ ಭಾರತ ತಂಡ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತಿತ್ತು. ಹೀಗಾಗಿ ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿದೆ. ಜನವರಿ 3 ರಂದು ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಸಂಪೂರ್ಣ ವೈಫಲ್ಯ ಅನುಭವಿಸಿತ್ತು. ಬೌಲಿಂಗ್ ನಲ್ಲೂ ಬುಮ್ರಾ ಹೊರತುಪಡಿಸಿ ಉಳಿದವರು ವಿಫಲರಾಗಿದ್ದರು. ಹೀಗಾಗಿ ಕೋಚ್ ದ್ರಾವಿಡ್ ಯುವ ಬ್ಯಾಟಿಗರು ಮತ್ತು ಬೌಲರ್ ಗಳಿಗೆ ವಿಶೇಷವಾಗಿ ಟಿಪ್ಸ್ ನೀಡುವ ದೃಶ್ಯ ಕಂಡುಬಂದಿದೆ.
ಟೀಂ ಇಂಡಿಯಾ ಅಭ್ಯಾಸದ ವೇಳೆ ಕನ್ನಡಿಗ ಬೌಲರ್ ಪ್ರಸಿದ್ಧ ಕೃಷ್ಣ ಮತ್ತು ಆರಂಭಿಕ ಯಶಸ್ವಿ ಜೈಸ್ವಾಲ್ ಗೆ ದ್ರಾವಿಡ್ ವಿಶೇಷವಾಗಿ ಸಲಹೆ ಸೂಚನೆ ನೀಡುತ್ತಿದ್ದರು. ದ್ರಾವಿಡ್ ಜೊತೆಗೆ ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ಪ್ರಸಿದ್ಧಗೆ ಸಲಹೆ ನೀಡಿದ್ದಾರೆ. ಇಬ್ಬರೂ ಆಟಗಾರರೂ ಮೊದಲ ಟೆಸ್ಟ್ ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದರು.