ಕೇಪ್ ಟೌನ್: ಮತ್ತೊಮ್ಮೆ ಐಸಿಸಿ ಟೂರ್ನಿಯ ಸೆಮಿಫೈನಲ್ ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಸೋತು ನಿರಾಸೆ ಅನುಭವಿಸಿದೆ.
ನಿನ್ನೆ ನಡೆದ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಕೇವಲ 5 ರನ್ ಗಳಿಂದ ಸೋತು ಮತ್ತೆ ಸೆಮಿಫೈನಲ್ ನಲ್ಲಿ ಸೋಲುವ ಚಾಳಿ ಮುಂದುವರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.
ಈ ಮೊತ್ತ ಯಶಸ್ವಿಯಾಗಿ ಬೆನ್ನತ್ತಿದ್ದರೆ ಅದು ದಾಖಲೆಯಾಗುತ್ತಿತ್ತು. ಆದರೆ ಭಾರತ ಆರಂಭದಲ್ಲೇ ಸ್ಮೃತಿ ಮಂಧನಾ, ಶಫಾಲಿ ವರ್ಮ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆದರೆ ಜೆಮಿಮಾ ರೊಡ್ರಿಗಸ್ ಬಿರುಸಿನ ಆಟದಿಂದ ಗೆಲುವಿನ ಆಸೆ ಚಿಗುರಿಸಿದ್ದರು. ಮಧ‍್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್ ಕೂಡಾ ಕೇವಲ 34 ಎಸೆತಗಳಲ್ಲಿ 52 ರನ್ ಸಿಡಿಸಿ ಗೆಲುವಿನ ಭರವಸೆ ಹೆಚ್ಚಿಸಿದ್ದರು. ಆದರೆ ಇನ್ ಫಾರ್ಮ್ ಬ್ಯಾಟಿಗ ರಿಚಾ ಘೋಷ್ 14 ಮತ್ತು ಹರ್ಮನ್ ಪ್ರೀತ್ ರನೌಟ್ ಆದ ಬಳಿಕ ಭಾರತ ಸೋಲಿನತ್ತ ಮುಖ ಮಾಡಿತು. ಹಾಗಿದ್ದರೂ ಕೊನೆಯ ಎಸೆತದವರೆಗೂ ಭಾರತೀಯ ವನಿತೆಯರು ಗೆಲುವಿಗೆ ಪ್ರಯತ್ನ ನಡೆಸಿದ್ದರು. ಆದರೆ ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಷ್ಟೇ ಶಕ್ತವಾಗಿ ಮತ್ತೊಮ್ಮೆ ಸೆಮಿಫೈನಲ್ ಗೇ ತನ್ನ ವಿಶ್ವಕಪ್ ಯಾತ್ರೆ ಮುಗಿಸಿತು.