Select Your Language

Notifications

webdunia
webdunia
webdunia
webdunia

ಭಾರತ, ಇಂಗ್ಲೆಂಡ್ ಟಿ20 ಸರಣಿ ಇಂದಿನಿಂದ: ಕೆಟ್ಟ ಮೇಲೆ ಬುದ್ಧಿ ಕಲಿತಾರಾ ಗೌತಮ್ ಗಂಭೀರ್ ಆಂಡ್ ಟೀಂ

Gautam Gambhir-Shreyas Iyer
Photo Credit: X
ಚೆಸ್ಟರ್ ಲೆ ಸ್ಟ್ರೀಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಬಹುನಿರೀಕ್ಷಿತ ಟಿ20 ಸರಣಿಯು ಇಂದು ಚಾಲನೆ ಪಡೆಯಲಿದೆ. ವೆಸ್ಟ್ ಇಂಡೀಸ್‌ನಲ್ಲಿ ನಡೆದ 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಸೋಲಿಸಿತ್ತು. ಈಗ ಇಂಗ್ಲೆಂಡ್ ತಂಡವು ತನ್ನದೇ ತವರಿನಲ್ಲಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.
 

ಮತ್ತೊಂದೆಡೆ, ಭಾರತ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಹೊಸ ಯುಗವನ್ನು ಆರಂಭಿಸುತ್ತಿದ್ದು, ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಎದುರಾದ 2-0 ಸರಣಿ ಸೋಲಿನ ಆಘಾತದಿಂದ ಹೊರಬರಲು ಈ ಸರಣಿ ಅತ್ಯಂತ ಪ್ರಮುಖವಾಗಿದೆ.

ವೈಭವ್ ಸೂರ್ಯವಂಶಿ ಆಡ್ತಾರಾ?

15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಇಂದಿನ ಪಂದ್ಯದಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಐರ್ಲೆಂಡ್ ಸರಣಿಯಲ್ಲಿ ಕೆಟ್ಟ ಮೇಲೆ ಗೌತಮ್ ಗಂಭೀರ್ ಮತ್ತು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಬುದ್ಧಿ ಕಲಿತಿರಬಹುದು ಎಂದು ಅಭಿಮಾನಿಗಳು ನಂಬಿದ್ದಾರೆ.

ಐಪಿಎಲ್ 2026ರ ಹೀರೋ: ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ವೈಭವ್, ಐಪಿಎಲ್ 2026ರಲ್ಲಿ ಭರ್ಜರಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ಗೆದ್ದಿದ್ದಾರೆ. ಅಷ್ಟೇ ಅಲ್ಲದೆ, ಒಂದೇ ಐಪಿಎಲ್ ಆವೃತ್ತಿಯಲ್ಲಿ ಕ್ರಿಸ್ ಗೇಲ್ ಅವರ ಗರಿಷ್ಠ ಸಿಕ್ಸರ್‌ಗಳ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.

ಐರ್ಲೆಂಡ್ ಸರಣಿಯಲ್ಲಿ ಆಡಿರಲಿಲ್ಲ: ಇತ್ತೀಚೆಗೆ ಮುಕ್ತಾಯಗೊಂಡ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಮ್ಯಾನೇಜ್‌ಮೆಂಟ್ ಇವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿರಲಿಲ್ಲ. ಇದರ ವಿರುದ್ಧ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಸೇರಿದಂತೆ ಹಲವರು ತೀವ್ರ ಆಕ್ರೋಶ ಹೊರಹಾಕಿದ್ದರು.

ಐರ್ಲೆಂಡ್ ವಿರುದ್ಧದ ಸೋಲಿನ ನಂತರ ಭಾರತ ತಂಡದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಬದಲಾವಣೆ ನಿರೀಕ್ಷಿಸಲಾಗಿದ್ದು, ನಾಳೆ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಅವರಿಗೆ ಆರಂಭಿಕರಾಗಿ ಕಣಕ್ಕಿಳಿಯುವ ಸುವರ್ಣ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

ಮುಖಾಮುಖಿ ಮತ್ತು ಇತ್ತೀಚಿನ ಫಾರ್ಮ್
ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಕ್ರಿಕೆಟ್‌ನಲ್ಲಿ ಯಾವಾಗಲೂ ಹೈ-ವೋಲ್ಟೇಜ್ ಪೈಪೋಟಿ ಇರುತ್ತದೆ. ಕಳೆದ ಮಾರ್ಚ್‌ನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿತ್ತು.

ಭಾರತ ತಂಡದ ಬಲ: ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಂತಹ ಅನುಭವಿಗಳ ಜೊತೆಗೆ ತಿಲಕ್ ವರ್ಮಾ (ಉಪನಾಯಕ), ಅಭಿಷೇಕ್ ಶರ್ಮಾ ಮತ್ತು ಹರ್ಷಿತ್ ರಾಣಾ ಅವರಂತಹ ಯುವ ಆಟಗಾರರ ದಂಡೇ ತಂಡದಲ್ಲಿದೆ.

ಇಂಗ್ಲೆಂಡ್ ತಂಡದ ಬಲ: ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ ತಂಡದಲ್ಲಿ ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಸ್ಯಾಮ್ ಕರ್ರನ್ ಮತ್ತು ಆದಿಲ್ ರಶೀದ್ ಅವರಂತಹ ಸ್ಟಾರ್ ಆಟಗಾರರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆ ಸಿಬ್ಬಂದಿ ಮೇಲೆ ಅಮಾನುಷ ಹಲ್ಲೆ ಮಾಡಿದ ಪಂಜಾಬ್ ಕಿಂಗ್ಸ್ ಕ್ರಿಕೆಟಿಗ ಶಶಾಂಕ್ ಸಿಂಗ್ Viral video