Publish Date: Fri, 18 Aug 2023 (08:20 IST)
Updated Date: Fri, 18 Aug 2023 (08:46 IST)
ಡುಬ್ಲಿನ್: ಭಾರತ ಮತ್ತು ಐರ್ಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ಆರಂಭವಾಗಲಿದೆ.
ಪ್ರಮುಖರ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ಯುವ ಪಡೆ ಅದೃಷ್ಟ ಪರೀಕ್ಷೆಗಿಳಿಯಲಿದೆ. ಬುಮ್ರಾ ಹೊರತುಪಡಿಸಿದರೆ ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ ವಾಡ್, ಯಶಸ್ವಿ ಜೈಸ್ವಾಲ್ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಸಂಜು ಸ್ಯಾಮ್ಸನ್ ಈ ಸರಣಿಯಲ್ಲೂ ವಿಫಲರಾದರೆ ಮುಂದೆ ಅವರಿಗೆ ಭಾರತ ತಂಡದಲ್ಲಿ ಅವಕಾಶ ಸಿಗುವುದೇ ಕಷ್ಟವಾಗಬಹುದು. ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯಬಹುದು. ಮಧ್ಯಮ ಕ್ರಾಂಕದಲ್ಲಿ ತಿಲಕ್ ವರ್ಮ, ಸಂಜು ಸ್ಯಾಮ್ಸನ್, ಶಿವಂ ದುಬೆ ಕಣಕ್ಕಿಳಿಯಬಹುದು.
ಬೌಲಿಂಗ್ ವಿಭಾಗದಲ್ಲಿ ಬುಮ್ರಾ ವಾಪಸಾತಿ ತಂಡಕ್ಕೆ ದೊಡ್ಡ ಬೂಸ್ಟ್ ಆಗಿದೆ. ಮುಂಬರುವ ಏಷ್ಯಾ ಕಪ್, ವಿಶ್ವಕಪ್ ಗೆ ಮುನ್ನ ಬುಮ್ರಾ ಲಯಕ್ಕೆ ಬರುವುದು ಟೀಂ ಇಂಡಿಯಾಗೆ ಮುಖ್ಯವಾಗಲಿದೆ. ಬುಮ್ರಾ ಜೊತೆಗೆ ಅರ್ಷ್ ದೀಪ್ ಸಿಂಗ್, ರವಿ ಬಿಷ್ಣೋಯ್ ಗೆ ಅವಕಾಶ ಸಿಗುವ ಸಾಧ‍್ಯತೆಯಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 7.30 ಕ್ಕೆ ಆರಂಭವಾಗುವುದು.