ರಾಜ್ ಕೋಟ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ರಾಜ್ ಕೋಟ್ ನಲ್ಲಿ ನಡೆಯಲಿದೆ.
ರಾಜ್ ಕೋಟ್ ಮೈದಾನ ಬ್ಯಾಟಿಗರ ಸ್ವರ್ಗವಾಗಿದೆ. ಹೀಗಾಗಿ ಇಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆಯಿದೆ. ಈಗಾಗಲೇ ಟೀಂ ಇಂಡಿಯಾ ಬ್ಯಾಟಿಗರು ಪೈಪೋಟಿಗೆ ಬಿದ್ದಂತೆ ಬ್ಯಾಟಿಂಗ್ ಮಾಡಿ ರನ್ ಗಡ್ಡೆ ಹಾಕಿದ್ದಾರೆ. ಈ ಪಂದ್ಯದಲ್ಲೂ ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ.
ಭಾರತ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿರುವುದರಿಂದ ಇಂದಿನ ಪಂದ್ಯದ ಫಲಿತಾಂಶ ಸರಣಿಯ ಮೇಲೆ ಪರಿಣಾಮ ಬೀರದು. ಆದರೆ ವಿಶ್ವಕಪ್ ಗೆ ಮೊದಲು ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಟೀಂ ಇಂಡಿಯಾ ಬಯಸಲಿದೆ. ಇಂದಿನ ಪಂದ್ಯಕ್ಕೆ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕಮ್ ಬ್ಯಾಕ್ ಮಾಡುತ್ತಿದ್ದಾರೆ. ವಿಶ್ವಕಪ್ ಗೆ ಮುನ್ನ ಅಭ್ಯಾಸ ಸಿಗಲು ಮೊಹಮ್ಮದ್ ಸಿರಾಜ್ ಕೂಡಾ ಇಂದು ಆಡಿದರೂ ಅಚ್ಚರಿಯಿಲ್ಲ. ಅತ್ತ ಆಸ್ಟ್ರೇಲಿಯಾ ಕೂಡಾ ಗೆಲುವಿನ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗುವುದು.