ವಿಶಾಖಪಟ್ಟಣಂ: ಏಕದಿನ ವಿಶ್ವಕಪ್ 2023 ಫೈನಲ್ ಸೋಲಿನ ಹತಾಶೆಯಲ್ಲಿರುವಾಗಲೇ ಟೀಂ ಇಂಡಿಯಾ ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡಲಿದೆ.
ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿ ದೃಷ್ಟಿಯಿಂದ ಈ ಸರಣಿ ಮಹತ್ವದ್ದಾಗಿದೆ. ಒಟ್ಟು ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಹಿರಿಯರ ಅನುಪಸ್ಥಿತಿಯಲ್ಲಿ ಯುವ ಭಾರತ ತಂಡ ದೈತ್ಯ ಆಸೀಸ್ ನ್ನು ಎದುರಿಸಲಿದೆ.
ಸೂರ್ಯಕುಮಾರ್ ಯಾದವ್ ತಂಡದ ನಾಯಕರಾಗಿದ್ದಾರೆ. ಆರಂಭಿಕರಾಗಿ ಋತುರಾಜ್ ಗಾಯಕ್ ವಾಡ್, ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮ, ಶಿವಂ ದುಬೆ, ರಿಂಕು ಸಿಂಗ್ ಮುಂತಾದ ಪ್ರತಿಭಾವಂತರಿದ್ದಾರೆ. ಬೌಲಿಂಗ್ ನಲ್ಲಿ ಪ್ರಸಿದ್ಧ ಕೃಷ್ಣ, ಅರ್ಷ್ ದೀಪ್ ಸಿಂಗ್, ರವಿ ಬಿಷ್ಣೋಯ್ ಸ್ಥಾನ ಪಡೆಯಬಹುದು.
ಅತ್ತ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಆಡಿದ ಅದೇ ತಂಡವನ್ನೇ ಕಣಕ್ಕಿಳಿಸಲಿದೆ. ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ತಂಡದ ನಾಯಕರಾಗಿದ್ದಾರೆ. ಉಳಿದಂತೆ ಘಟಾನುಘಟಿ ಆಟಗಾರರು ತಂಡದಲ್ಲಿದ್ದಾರೆ. ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದ ಹುಮ್ಮಸ್ಸಿನಲ್ಲಿರುವ ಆಸೀಸ್ ಈಗ ಮತ್ತೆ ಭಾರತೀಯ ನೆಲದಲ್ಲಿ ವಿಜೃಂಭಿಸಲು ಕಾದಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು ಜಿಯೋ ಸಿನಿಮಾ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.