ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಬ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಗೆ ಅಗ್ನಿ ಪರೀಕ್ಷೆಯಿದೆ. ಇದರಲ್ಲಿ ಗಿಲ್ ಪಾಸಾದರೆ ಕೆಎಲ್ ರಾಹುಲ್ ಗೆ ಇಂದು ಮಹತ್ವದ ದಿನವಾಗಿದೆ.
ಶುಬ್ಮನ್ ಗಿಲ್ ಮೊದಲ ಇನಿಂಗ್ಸ್ ನಲ್ಲಿ ಶೂನ್ಯ ಸಂಪಾದಿಸಿದ್ದರು. ಎರಡನೇ ಇನಿಂಗ್ಸ್ ನಲ್ಲಿ ಇದುವರೆಗೆ ಉತ್ತಮ ಆಟ ಪ್ರದರ್ಶಿಸಿರುವ ಅವರು ತಂಡ ಸಂಕಷ್ಟದಲ್ಲಿದ್ದಾಗ ಉಪಯುಕ್ತ 33 ರನ್ ಗಳ ಕೊಡುಗೆ ನೀಡಿದ್ದಾರೆ. ಆದರೆ ಕೆಎಲ್ ರಾಹುಲ್ ಮೊದಲ ಇನಿಂಗ್ಸ್ ನಲ್ಲಿ 16 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.
ಈ ಇಬ್ಬರೂ ಆಟಗಾರರಿಗೆ ಈಗ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದ್ದಾರೆ. ಇವರ ಸ್ಥಾನ ಕಸಿಯಲು ಸರ್ಫರಾಜ್ ಖಾನ್ ಲೈನ್ ನಲ್ಲಿ ನಿಂತಿದ್ದಾರೆ. ಒಂದು ವೇಳೆ ಇಬ್ಬರಲ್ಲಿ ಒಬ್ಬರು ವಿಫಲರಾದರೂ ಮುಂದಿನ ಪಂದ್ಯಗಳಲ್ಲಿ ಸರ್ಫರಾಜ್ ಗೆ ಅವಕಾಶ ಸಿಗಬಹುದು.
ಹೀಗಿರುವಾಗ ಗಿಲ್ ನಿನ್ನೆಯ ದಿನದಂತ್ಯದಲ್ಲಿ ಉಪಯುಕ್ತ ಇನಿಂಗ್ಸ್ ಆಡುವ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಂಡರು. ಇದೀಗ ಕೆಎಲ್ ರಾಹುಲ್ ಸರದಿ. ಅವರು ಇಂದು ಬ್ಯಾಟಿಂಗ್ ಗೆ ಅವಕಾಶ ಸಿಕ್ಕರೆ ಅದನ್ನು ಸರಿಯಾಗಿ ಬಳಸಿಕೊಳ್ಳದೇ ಇದ್ದರೆ ಟೆಸ್ಟ್ ತಂಡದಲ್ಲೂ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ರಾಹುಲ್ ಗೆ ಇಂದು ಅಗ್ನಿ ಪರೀಕ್ಷೆ ಎದುರಾಗಲಿದೆ.