ಕ್ಯಾನ್ ಬೆರಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ಮುಕ್ತಾಯವಾಗಿದೆ. ಇಂದಿನಿಂದ ಟಿ20 ಪರೀಕ್ಷೆ ಶುರುವಾಗಲಿದೆ. ಎಷ್ಟು ಗಂಟೆಗೆ ಶುರು ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಏಕದಿನ ಸರಣಿಯನ್ನು ಟೀಂ ಇಂಡಿಯಾ ಸೋತಿದೆ. ಆದರೆ ಟಿ20 ಸರಣಿಯಲ್ಲಿ ಅಷ್ಟು ಸುಲಭವಾಗಿ ಸೋಲೊಪ್ಪುವ ಸಾಧ್ಯತೆಯೇ ಇಲ್ಲ. ಯಾಕೆಂದರೆ ಟೀಂ ಇಂಡಿಯಾ ಕಿರು ಮಾದರಿಯಲ್ಲಿ ಪ್ರಬಲ ತಂಡ ಎಂಬುದರಲ್ಲಿ ಎರಡು ಮಾತಿಲ್ಲ.
ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಈಗಾಗಲೇ ಏಷ್ಯಾ ಕಪ್ ನಲ್ಲಿ ಭರ್ಜರಿ ಆರಂಭ ನೀಡಿತ್ತು. ಇದೀಗ ಇದೇ ಓಪನಿಂಗ್ ಜೋಡಿ ಮೇಲೆ ಭಾರೀ ನಿರೀಕ್ಷೆಯಿದೆ. ಇನ್ನು, ತಿಲಕ್ ವರ್ಮ, ಸಂಜು ಸ್ಯಾಮ್ಸನ್ ಒಳಗೊಂಡ ಟೀಂ ಇಂಡಿಯಾ ಬ್ಯಾಟಿಂಗ್ ಬಲಿಷ್ಠವಾಗಿದೆ.
ಆದರೆ ಬೌಲಿಂಗ್ ನಲ್ಲೇ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಅಂತಿಮ ಬಳಗವನ್ನು ಆಯ್ಕೆ ಮಾಡುವುದು ತಲೆನೋವಿನ ಸಂಗತಿ. ಹಾಗಿದ್ದರೂ ಜಸ್ಪ್ರೀತ್ ಬುಮ್ರಾ ಜೊತೆಗೆ ಅರ್ಷ್ ದೀಪ್ ಸಿಂಗ್, ಅಕ್ಸರ್ ಪಟೇಲ್ ಇರುವುದು ಖಚಿತ. ಉಳಿದಂತೆ ಮೂರನೇ ವೇಗಿ ಸ್ಥಾನವನ್ನು ಶಿವಂ ದುಬೆ ಅಥವಾ ನಿತೀಶ್ ಕುಮಾರ್ ರೆಡ್ಡಿ ತುಂಬಬೇಕಿದೆ.
ಅತ್ತ ಆಸ್ಟ್ರೇಲಿಯಾವೂ ಕಡಿಮೆಯೇನಲ್ಲ. ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಟಿಮ್ ಡೇವಿಡ್ ರಂತಹ ಹೊಡೆಬಡಿಯ ಆಟಗಾರರೇ ತಂಡದಲ್ಲಿದ್ದಾರೆ. ಅಲ್ಲದೆ, ಆಸ್ಟ್ರೇಲಿಯಾವನ್ನು ಅದರದ್ದೇ ನೆಲದಲ್ಲಿ ಸೋಲಿಸುವುದು ಸುಲಭದ ಮಾತಲ್ಲ. ಹೀಗಾಗಿ ಈ ಸರಣಿಯಲ್ಲಿ ಪ್ರಬಲ ಪೈಪೋಟಿ ನಿರೀಕ್ಷಿಸಬಹುದಾಗಿದೆ. ಈ ಪಂದ್ಯ ಮಧ್ಯಾಹ್ನ 1.45 ಕ್ಕೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಹಾಟ್ ಸ್ಟಾರ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.