ಮೊಹಾಲಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಮುಕೇಶ್ ಕುಮಾರ್, ಅಕ್ಸರ್ ಪಟೇಲ್ ತಲಾ 2, ಶಿವಂ ದುಬೆ 1 ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 17.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವು ಕಂಡಿತು. ಭಾರತಕ್ಕೆ ಬಹಳ ದಿನಗಳ ನಂತರ ರೋಹಿತ್ ಶರ್ಮಾ ಪುನರಾಗಮನವಾದರೂ ಅವರು ಶೂನ್ಯಕ್ಕೇ ರನೌಟ್ ಆಗಿ ನಿರಾಸೆ ಮೂಡಿಸಿದರು. ಒಂದು ಹಂತದಲ್ಲಿ 28 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಯುವ ಕ್ರಿಕೆಟಿಗರೇ ಭಾರತಕ್ಕೆ ಆಸರೆಯಾದರು.
ತಿಲಕ್ ವರ್ಮ-ಶಿವಂ ದುಬೆ ಜೋಡಿ ಭಾರತಕ್ಕೆ ಆಸರೆಯಾಯಿತು. ತಿಲಕ್ ವರ್ಮ 26 ರನ್ ಗಳಿಸಿ ಔಟಾದರು. ಶಿವಂ ದುಬೆ ಕೊನೆಯವರೆಗೂ ಅಜೇಯರಾಗುಳಿದು 60 ರನ್ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟಿಗ ಜಿತೇಶ್ ಶರ್ಮ 31 ರನ್ ಗಳ ಉಪಯುಕ್ತ ಕೊಡುಗೆ ನೀಡಿದರು. ಫಿನಿಶರ್ ಪಾತ್ರವನ್ನು ಮತ್ತೊಮ್ಮೆ ಅತ್ಯುತ್ತಮವಾಗಿ ನಿಭಾಯಿಸಿದ ರಿಂಕು ಸಿಂಗ್ 16 ರನ್ ಗಳಿಸಿ ಅಜೇಯರಾಗುಳಿದರು.