ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಮೂವರು ಕನ್ನಡಿಗೆ ಅವಕಾಶ ನೀಡಲಾಗಿದೆ.
ಇಂಗ್ಲೆಂಡ್ ಸರಣಿಗೆ 18 ಮಂದಿ ಆಟಗಾರರ ತಂಡವನ್ನು ಅಂತಿಮಗೊಳಿಸಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್. ಅಶ್ವಿನ್ ನಿವೃತ್ತಿಯ ಬಳಿಕ ಹೊಸ ಹುಡುಗರ ತಂಡ ಈ ಬಾರಿ ಇಂಗ್ಲೆಂಡ್ ಗೆ ಹೊರಡಲಿದೆ. ಭಾರತ ಪುರುಷರ ಕ್ರಿಕೆಟ್ ತಂಡದ ಮುಂದಿನ ನಾಯಕನಾಗಿ ಶುಭಮನ್ ಗಿಲ್ ಅವರನ್ನು ನೇಮಿಸಲಾಗಿದೆ. ಉಪನಾಯಕನಾಗಿ ರಿಷಭ್ ಪಂತ್ ನೇಮಕವಾಗಿದ್ದಾರೆ.
18 ಮಂದಿಯ ತಂಡದಲ್ಲಿ ಕರ್ನಾಟಕದ ಬ್ಯಾಟರ್‌ಗಳಾದ ಕೆ.ಎಲ್. ರಾಹುಲ್, ಕರುಣ್ ನಾಯರ್ ಮತ್ತು ವೇಗಿ ಪ್ರಸಿದ್ಧಕೃಷ್ಣ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂವರು ಆಟಗಾರರು ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ, ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶಿಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ, ಇಂಗ್ಲೆಂಡ್ ಕೌಂಟಿಯಲ್ಲಿ ಆಡಿ ಅನುಭವ ಇರುವ ಕರ್ನಾಟಕದ ಕರುಣ್ ನಾಯರ್ ಅವರು ಎಂಟು ವರ್ಷಗಳ ಬಳಿಕ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ. ಅದಕ್ಕೂ ಮೊದಲು ಅವರು ಭಾರತ ಎ ತಂಡದ ಪರವಾಗಿ ಇಂಗ್ಲೆಂಡ್ ಗೆ ತೆರಳಲಿದ್ದಾರೆ.
ಅನುಭವಿ ರಾಹುಲ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಉತ್ತಮ ಪ್ರದರ್ಶನ ತೋರಿದ್ದಾರೆ. ಪ್ರಸಿದ್ಧ್ ಕೃಷ್ಣ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಈವರೆಗೆ ಆಡಿರುವ 13 ಪಂದ್ಯಗಳಲ್ಲಿ 19.67 ಸರಾಸರಿಯಲ್ಲಿ 21 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತವು ಐದು ಟೆಸ್ಟ್ ಪಂದ್ಯವಾಡಲಿದೆ. ಜೂನ್ 20ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯು ಆಗಸ್ಟ್ 4ರವರೆಗೆ ಸಾಗಲಿದೆ. ಐದು ಪಂದ್ಯಗಳು ಕ್ರಮವಾಗಿ ಹೇಡಿಂಗ್ಲೆ, ಎಜ್ ಬಾಸ್ಟನ್, ಲಾರ್ಡ್ಸ್, ಮ್ಯಾಂಚೆಸ್ಟರ್ ಮತ್ತು ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯಲಿದೆ.
18 ಮಂದಿಯ ತಂಡ ಹೀಗಿದೆ: ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪ ನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೇಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್, ಅರ್ಶದೀಪ್ ಸಿಂಗ್ ಮತ್ತು ಕುಲದೀಪ್ ಯಾದವ್.