ದುಬೈ: ಚಾಂಪಿಯನ್ಸ್ ಟ್ರೋಫಿ ಆಡಲು ದುಬೈನಲ್ಲಿದ್ದ ಟೀಂ ಇಂಡಿಯಾ ಆಟಗಾರರಿಗೆ ಆರತಿ ಮಾಡಿ ತಿಲಕವಿಟ್ಟು ಸ್ವಾಗತ ಕೋರಿದ್ದಕ್ಕೆ ಕೋಚ್ ಗೌತಮ್ ಗಂಭೀರ್ ಹಾಗೆ ಮಾಡಬೇಡಿ ಎಂದು ಖಡಕ್ ಸೂಚನೆ ಕೊಟ್ಟಿದ್ದರಂತೆ. ಅದಕ್ಕೆ ಕಾರಣವೂ ಇದೆ.
ಟೀಂ ಇಂಡಿಯಾ ಆಟಗಾರರು ದುಬೈನಲ್ಲಿ ತಾಜ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಹೋಟೆಲ್ ವ್ಯವಸ್ಥಾಪಕ ಸಿಬ್ಬಂದಿ ಸೌರಭ್ ತಿವಾರಿ ಎಂಬವರು ಕೋಚ್ ಗೌತಮ್ ಗಂಭಿರ್ ನೀಡಿದ್ದ ಖಡಕ್ ಸೂಚನೆ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧ ಭಾರತ ಪಂದ್ಯ ಗೆದ್ದು ಬಂದಾಗ ಆಟಗಾರರಿಗೆ ಆರತಿ ಮಾಡಿ, ತಿಲಕವಿಟ್ಟು ಸ್ವಾಗತ ಕೋರಲಾಯಿತು. ಆದರೆ ಕೆಲವೇ ಕ್ಷಣಗಳಲ್ಲಿ ಕೋಚ್ ಗೌತಮ್ ಗಂಭೀರ್ ಹೀಗೆ ಮಾಡಬೇಡಿ ಎಂದು ಖಡಕ್ ಸೂಚನೆ ನೀಡಿದರಂತೆ.
ಈಗಲೇ ನೀವು ಆರತಿ ಮಾಡಿ ತಿಲಕವಿಡಬೇಡಿ. ಅದಕ್ಕಿನ್ನೂ ಸಮಯವಿದೆ. ಟ್ರೋಫಿ ಗೆದ್ದ ಮೇಲೆ ಹೀಗೆ ಸಂಭ್ರಮಿಸೋಣ. ಈಗಲೇ ಸಂಭ್ರಮಿಸುವ ಸಮಯವಲ್ಲ ಎಂದು ಗಂಭೀರ್ ಸೂಚನೆ ನೀಡಿದ್ದರಂತೆ. ಅದರಂತೆ ಟ್ರೋಫಿ ಗೆದ್ದು ಬಂದ ಮೇಲೆ ಟೀಂ ಇಂಡಿಯಾ ಆಟಗಾರರಿಗೆ ಅದೇ ರೀತಿ ಸ್ವಾಗತ ಕೋರಲಾಯಿತು ಎಂದಿದ್ದಾರೆ.