ಡೊಮಿನಿಕಾ: ಟೆಸ್ಟ್ ಪಂದ್ಯಗಳಲ್ಲಿ ತಾವೇಕೆ ಮುಖ್ಯ ಎನ್ನುವುದನ್ನು ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ಸಾಬೀತುಪಡಿಸಿದರು. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ತಮ್ಮನ್ನು ತಂಡದಿಂದ ಹೊರಗಿಟ್ಟ ಮ್ಯಾನೇಜ್ ಮೆಂಟ್ ಪಶ್ಚಾತ್ತಾಪ ಪಡುವಂತೆ ಮಾಡಿದರು.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಅಶ್ವಿನ್ ಐದು ವಿಕೆಟ್ ಕಬಳಿಸಿ ಎದುರಾಳಿಗಳನ್ನು ಮೊದಲ ಇನಿಂಗ್ಸ್ ನಲ್ಲಿ ಕೇವಲ 150 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಗೆ ಆರಂಭಿಕರು ಎಚ್ಚರಿಕೆಯ ಆರಂಭ ನೀಡಿದರು. ಆರಂಭದಲ್ಲಿ ವೇಗಿಗಳು ವಿಕೆಟ್ ಕೀಳಲು ವಿಫಲರಾದಾಗ ನಾಯಕ ರೋಹಿತ್ ಅನುಭವಿ ಅಶ್ವಿನ್ ಮತ್ತು ಜಡೇಜಾ ಜೋಡಿಯನ್ನು ದಾಳಿಗಿಳಿಸಿತು. ಅಶ್ವಿನ್ ಆರಂಭಿಕರಿಬ್ಬರನ್ನೂ ಪೆವಿಲಿಯನ್ ಗಟ್ಟಿದರು. ಅವರಿಗೆ ತಕ್ಕ ಸಾಥ್ ನೀಡಿದ ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಅಶ್ವಿನ್ ಮತ್ತೊಮ್ಮೆ 5 ವಿಕೆಟ್ ಗಳ ಗೊಂಚಲು ಪಡೆದರು.
ವಿಂಡೀಸ್ ಪರ ಅಲಿಕ್ ಅಥನಝೆ 47, ನಾಯಕ ಬ್ರಾತ್ ವೈಟ್ 20 ರನ್, ಕಾರ್ನ್ ವಾಲ್ ಅಜೇಯ 19 ರನ್ ಗಳಿಸಿದರು. ಇದೀಗ ಮೊದಲ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಮೊದಲ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 80 ರನ್ ಗಳಿಸಿದೆ. ಆರಂಭಿಕರಾಗಿ ಕಣಕ್ಕಿಳಿದಿರುವ ಯುವ ಬ್ಯಾಟಿಗ ಯಶಸ್ವಿ ಜೈಸ್ವಾಲ್ 40 ಮತ್ತು ನಾಯಕ ರೋಹಿತ್ ಶರ್ಮಾ 30 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರತ ಇದೀಗ ಕೇವಲ 70 ರನ್ ಗಳ ಹಿನ್ನಡೆಯಲ್ಲಿದೆ.